ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಕೌಂಟಿ ಕ್ರಿಕೆಟ್ ಚಾಂಪಿಯನ್ಷಿಪ್ನಲ್ಲಿ ತಮ್ಮ ಸ್ಪಿನ್ ಮೋಡಿ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಒನ್ ಡೇ ಕಪ್ ಟೂರ್ನಿಯಲ್ಲಿ ಗಮನ ಸೆಳೆದಿದ್ದ ಲೆಗ್ ಸ್ಪಿನ್ನರ್, ಇದೀಗ ರೆಡ್ ಬಾಲ್ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯ ಏನೆಂಬುದನ್ನು ಅನಾವರಣ ಪಡಿಸಿದ್ದಾರೆ.
ಇಂಡಿಯನ್ ಕ್ರಿಕೆಟ್ ಟೀಮ್ ಪರ ವೈಟ್ಬಾಲ್ ಕ್ರಿಕೆಟ್ನಲ್ಲಿ ದೀರ್ಘ ಸಮಯ ಆಡಿರುವ ಯುಜ್ವೇಂದ್ರ ಚಹಲ್ ಅವರನ್ನು ಇತ್ತೀಚೆಗೆ ಕಡೆಗಣಿಸಲಾಗಿದೆ. 2024ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತಾದರೂ, ಟೂರ್ನಿಯುದ್ದಕ್ಕೂ ಬೆಂಚ್ ಕಾಯುವಂತ್ತಾಗಿತ್ತು. ಟೀಮ್ ಇಂಡಿಯಾ ಆಡಿದ ಒಂದು ಯಾವುದೇ ಪಂದ್ಯದಲ್ಲೂ ಚಹಲ್ಗೆ ಅಡುವ 11ರಲ್ಲಿ ಸ್ಥಾನ ಸಿಕ್ಕಿರಲಿಲ್ಲ.
ಈ ಸಮಯ ಬಳಸಿಕೊಂಡ ಯುಜ್ವೇಂದ್ರ ಚಹಲ್, ಇಂಗ್ಲೆಂಡ್ಗೆ ತೆರಳಿ ಕೌಂಟಿ ಕ್ರಿಕೆಟ್ ಆಡಲು ಮುಂದಾದರು. ಮೊದಲಿಗೆ ಕೌಂಟಿ ಕ್ರಿಕೆಟ್ ಒನ್ ಡೇ ಕಪ್ ಟೂರ್ನಿಯಲ್ಲಿ ಪಾಲ್ಗೊಂಡು ಈಗ ಕೌಂಟಿ ಚಾಂಪಿಯನ್ಷಿಪ್ನಲ್ಲಿ ರೆಡ್ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. ತಮ್ಮನ್ನು ಭಾರತದ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುವುದಿರಲಿ ಪ್ರತಿಷ್ಠಿತ ದುಲೀಪ್ ಟ್ರೋಫಿ ಟೂರ್ನಿಗೂ ಆಯ್ಕೆ ಮಾಡದ ಸೆಲೆಕ್ಟರ್ಸ್ ವಿರುದ್ಧ ಈಗ ಭರ್ಜರಿ ಪ್ರದರ್ಶನಗಳ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಆಫ್ ಸ್ಪಿನ್ನರ್ ರಾಬ್ ಕಿಯೋಗ್ ಜೊತೆಗೂಡಿ ಸ್ಪಿನ್ ಬಲೆ ಹೆಣೆದ ಯುಜ್ವೇಂದ್ರ ಚಹಲ್ 45ಕ್ಕೆ 5 ವಿಕೆಟ್ ಸಂಪಾದಿಸಿದರು. ಪರಿಣಾಮ ಡರ್ಬಿಶೈರ್ ಎದುರು ನಾರ್ತ್ಹ್ಯಾಂಪ್ಟನ್ಶೈರ್ ತಂಡಕ್ಕೆ ಮೊದಲ ಇನಿಂಗ್ಸ್ನಲ್ಲಿ 54 ರನ್ಗಳ ಮುನ್ನಡೆ ಲಭ್ಯವಾಯಿತು.