ಟೂರ್ನಿಯಲ್ಲಿ ಈ ಮೊದಲು ಆಡಿದ 5 ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ್ದ ಫಾಫ್, ಕೊನೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶ್ರೇಷ್ಠ ಲಯ ಕಂಡುಕೊಂಡರು. ಅವರ ಈ ಇನಿಂಗ್ಸ್ ವೇಳೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೆಸರಲ್ಲಿದ್ದ ಸಿಕ್ಸರ್ಗಳ ದಾಖಲೆ ಒಂದನ್ನು ಅಳಿಸಿ ಹಾಕಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಬಲಗೈ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಐಪಿಎಲ್ ಅಖಾಡದಲ್ಲಿ ಒಟ್ಟಾರೆ 148 ಸಿಕ್ಸರ್ಗಳನ್ನು ಸಿಡಿಸಿದ್ದರು. ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಬೌಲಿಂಗ್ ವಿಭಾಗದ ದಾಳಿ ಎದುರು 3 ಸಿಕ್ಸರ್ ಸಿಡಿಸುವಲ್ಲಿ ಯಶಸ್ವಿಯಾದ ಫಾಫ್ 150 ಸಿಕ್ಸರ್ಗಳ ಗಡಿ ದಾಟಿದರು. ಐಪಿಎಲ್ ಅಖಾಡದಲ್ಲಿ ಯುವರಾಜ್ ಸಿಂಗ್ ಒಟ್ಟಾರೆ 149 ಸಿಕ್ಸರ್ಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ವೇಗಿ ಜೆರಾಲ್ಡ್ ಕೊಯೆಟ್ಝಿ ಎದುರು ಮಿಡ್ ಆಫ್ ಕಡೆಗೆ ಸಿಕ್ಸರ್ ಬಾರಿಸುವ ಮೂಲಕ ಫಾಫ್ ದಿಗ್ಗಜ ಯುವಿ ದಾಖಲೆ ಮುರಿದರು.
ಐಪಿಎಲ್ನಲ್ಲಿ ಈ ಮೊದಲು ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಪ್ರತಿನಿಧಿಸಿ ಯಶಸ್ವಿ ಆರಂಭಿಕ ಬ್ಯಾಟರ್ ಎನಿಸಿರುವ ಫಾಫ್ ಡು ಪ್ಲೆಸಿಸ್, 2022ರಲ್ಲಿ ಆರ್ಸಿಬಿ ತಂಡ ಸೇರಿ ನಾಯಕತ್ವ ವಹಿಸಿಕೊಂಡರು. ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಫಾಫ್, ಈ ಬಾರಿ ಮೊದಲ 5 ಪಂದ್ಯಗಳಲ್ಲಿ ಒಟ್ಟು 109 ರನ್ಗಳನ್ನು ಮಾತ್ರವೇ ಗಳಿಸಿದ್ದರು. 39 ವರ್ಷದ ಬಲಗೈ ಬ್ಯಾಟರ್ ಕೊನೆಗೂ ವೈಫಲ್ಯದಿಂದ ಹೊರಬಂದು ಅರ್ಧಶತಕ ಬಾರಿಸಿದರು. ಅಷ್ಟೇ ಅಲ್ಲದೆ ರಜತ್ ಪಾಟಿದಾರ್ (26 ಎಸೆತಗಳಲ್ಲಿ 50 ರನ್) ಜೊತೆಗೂಡಿ 47 ಎಸೆತಗಳಲ್ಲಿ 82 ರನ್ಗಳ ಜೊತೆಯಾಟವನ್ನೂ ಆಡಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಆರಂಭದಲ್ಲೇ ವಿರಾಟ್ ಕೊಹ್ಲಿ (3) ವಿಕೆಟ್ ಕಳೆದುಕೊಂಡಿತು. ಆದರೆ, ಫಾಫ್ ಮತ್ತು ರಜತ್ ಪಾಟಿದಾರ್ ಫಿಫ್ಟಿ ಬಳಿಕ ಸ್ಲಾಗ್ ಓವರ್ಗಳಲ್ಲಿ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ ಬಾರಿಸಿದ 53* ರನ್ಗಳ ಬಲದಿಂದ 20 ಓವರ್ಗಳಲ್ಲಿ 196/8 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಮುಂಬೈ ಪರ ವೇಗಿ ಜಸ್ಪ್ರೀತ್ ಬುಮ್ರಾ 21ಕ್ಕೆ 5 ವಿಕೆಟ್ ಪಡೆದರು. ಅವರಿಗೆ ಪಂದ್ಯ ಶ್ರೇಷ್ಠ ಗೌರವವೂ ಒಲಿಯಿತು.
ಬಳಿಕ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ 15.3 ಓವರ್ಗಳಲ್ಲೇ ಗೆಲುವಿನ ಕೇಕೆ ಹಾಕಿತು. ಓಪನರ್ಗಳಾದ ಇಶಾನ್ ಕಿಶನ್ (69), ರೋಹಿತ್ ಶರ್ಮಾ (38), ಸೂರ್ಯಕುಮಾರ್ ಯಾದವ್ (52) ಮತ್ತು ಹಾರ್ದಿಕ್ ಪಾಂಡ್ಯ (21*) ಸ್ಪೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಭರ್ಜರಿ ಜಯ ತಂದರು