ಮಂಡ್ಯ:- ಜಿಲ್ಲೆಯ ಹೆಬ್ಬಕವಾಡಿ ಗ್ರಾಮದಲ್ಲಿ ಪ್ರೀತಿಸಿದ ಹುಡುಗ ಕೈ ಕೊಟ್ಟಿದ್ದಕ್ಕೆ ಯುವತಿ ಸೂಸೈಡ್ ಮಾಡಿಕೊಂಡಿದ್ದು, ಮಗಳು ಸತ್ತ 20 ದಿನದ ಬಳಿಕ ಇದೀಗ ತಾಯಿಯು ನೇಣಿಗೆ ಕೊರಳೊಡ್ಡಿದ ದಾರುಣ ಘಟನೆ ಜರುಗಿದೆ.
ಇತ್ತೀಚೆಗಷ್ಟೇ 21 ವರ್ಷದ ವಿಜಯಲಕ್ಷ್ಮಿ ಎಂಬ ಯುವತಿ ರೈಲಿಗೆ ತಲೆ ಕೊಟ್ಟು ಸೂಸೈಡ್ ಮಾಡಿಕೊಂಡಿದ್ದರು. ಆ ಬಳಿಕ ಮಗಳ ನೆನಪಲ್ಲೇ ಇದ್ದ ತಾಯಿ ಲಕ್ಷ್ಮೀ ಕರುಳ ಹಿಂಸೆ ತಾಳಲಾರದೇ ಇದೀಗ ನೇಣಿಗೆ ಕೊರಳೊಡ್ಡಿದ್ದಾರೆ. ಮೃತ ವಿಜಯಲಕ್ಷ್ಮಿ ಕಳೆದ ಕೆಲವು ವರ್ಷಗಳಿಂದ ಹರಿಕೃಷ್ಣ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು.
ಪ್ರೀತಿಸುವ ನೆಪದಲ್ಲಿ ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ ಇತ್ತೀಚಿಗೆ ಬೇರೆ ಹುಡುಗಿಯರ ಜೊತೆ ಹರಿಕೃಷ್ಣ ಓಡಾಡಲು ಶುರುಮಾಡಿದ್ದ. ಈ ಬಗ್ಗೆ ಪ್ರಶ್ನಿಸಿದ್ದ ಯುವತಿ, ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದ್ದಳು. ಆಗ ಮದುವೆಗೆ ನಿರಾಕರಿಸಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಸಿದ್ದ.
ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ವಿಜಯಲಕ್ಷ್ಮಿ ಕಳೆದ 20 ದಿನಗಳ ಹಿಂದೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ತಂದೆ ನಂಜುಂಡೇಗೌಡ ಮಂಡ್ಯ ಗ್ರಾಮಾಂತರ ಠಾಣೆಗೆ ತೆರಳಿದ್ದರು. ಈ ವೇಳೆ ದೂರು ಕೊಟ್ಟು ನ್ಯಾಯ ಕೋರಲು ಹೋಗಿದ್ದವರ ಮೇಲೆಯೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇತ್ತ ಮಗಳ ಸಾವಿಗೆ ನ್ಯಾಯವೂ ಇಲ್ಲ, ನಮಗೆ ನೆಮ್ಮದಿಯೂ ಇಲ್ಲ ಎಂದು ನೊಂದ ತಾಯಿ ಲಕ್ಷ್ಮಿ ಗುರುವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.