ಮಂಗಳೂರು:- ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,, ಅಯೋಧ್ಯೆ ರಾಮಮಂದಿರಕ್ಕೆ ತೆರಳಲು ಯಾರ ಅನುಮತಿಯೂ ಬೇಕಾಗಿಲ್ಲ, ಅಲ್ಲಿಗೆ ಪ್ರತಿಷ್ಠಾ ದಿನವೇ ಹೋಗಬೇಕು ಎಂದೇನಿಲ್ಲ.
ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ, ಅಲ್ಲಿಗೆ ಎಲ್ಲರೂ ಹೋಗಬೇಕು, ಆದರೆ ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿಗಳೇ ಹೇಳುತ್ತಿದ್ದಾರೆ.
ಇದು ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು, ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ ಎಂದರು.
ಮಂದಿರ ನಿರ್ಮಾಣ ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ. ರಾಜ್ಯದಲ್ಲೂ ದೇವಸ್ಥಾನಗಳಲ್ಲಿ ಪ್ರತಿಷ್ಠಾ ದಿನ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸುವಂತೆ ಸೂಚಿಸಲಾಗಿದೆ. ಮಂದಿರ ಬಗ್ಗೆ ಎಲ್ಲರಿಗೂ ಗೌರವ ಇದೆ, ಆದರೆ ಅದರಲ್ಲಿ ರಾಜಕಾರಣ ಬೆರೆಸಬಾರದು. ಆದರೆ ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಅದನ್ನು ಬಳಸಲಾಗುತ್ತಿದೆ. ದೇವಸ್ಥಾನಗಳು ಇರುವುದು ನಮಗಾಗಿ, ಭಕ್ತಿ ಇರುವವರು ದೇವಸ್ಥಾನಕ್ಕೆ ಹೋಗುತ್ತಾರೆ. ಸ್ವ ಇಚ್ಛೆಯಿಂದ ಎಲ್ಲರೂ ಹೋಗುತ್ತಾರೆ, ಹೋಗದಿದ್ದರೆ, ಟೀಕೆ ಮಾಡಬಾರದು ಎಂದರು.
ಕೋವಿಡ್ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ. ಆದರೆ ಅವರು ಈವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಈ ಬಗ್ಗೆ ತನಿಖಾ ಸಮಿತಿಗೆ ದಾಖಲೆ ಸಲ್ಲಿಸುವಂತೆ ಯತ್ನಾಳ್ಗೆ ಮೌಖಿಕವಾಗಿ ತಿಳಿಸಲಾಗಿದೆ. ಆರೋಪ ಮಾಡುವ ಜತೆಗೆ ತನಿಖಾ ಸಮಿತಿ ಮುಂದೆ ದಾಖಲೆ ನೀಡುವಂತೆ ಹೇಳಲಾಗಿದೆ. ತನಿಖಾ ಆಯೋಗದ ವಿಚಾರಣೆ ವೇಳೆ ದಾಖಲೆ ನೀಡಿದರೆ ಉಪಯೋಗವಾಗುತ್ತದೆ ಎಂದು ಯತ್ನಾಳ್ಗೆ ಸಲಹೆ ನೀಡಲಾಗಿದೆ ಎಂದರು.