ಹುಣಸೆ ಮರವು ದೊಡ್ಡ ಮತ್ತು ಬಲವಾದ ಮರವಾಗಿದೆ. ಇದು ಅಗಾಧವಾಗಿ ಬೆಳೆಯುವ ಮರಗಳ ಜಾತಿಗೆ ಸೇರಿರುವ ಮರವಾಗಿದೆ. ಇದರ ಎಲೆಗಳು ಚಿಕ್ಕದಾಗಿರುತ್ತವೆ, ವೃತ್ತಾಕಾರದಲ್ಲಿರುತ್ತವೆ ಮತ್ತು ಹೂವುಗಳು ಕೆಂಪು ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಹುಣಸೆ ಹಣ್ಣುಗಳು ಉದ್ದ ಮತ್ತು ತೆಳ್ಳಗಿರುತ್ತವೆ, ಬೀಜಗಳನ್ನು ಹೊಂದಿರುವ ಈ ಹಣ್ಣು ಕೆಲವೊಮ್ಮೆ ಹುಳಿ ಅನುಭವವನ್ನು ನೀಡುತ್ತದೆ. ಹುಣಸೆ ಹಣ್ಣಿನ ಸೇವನೆಯು ಭಕ್ಷ್ಯಗಳಿಗೆ ಸಿಹಿ ಮತ್ತು ಹುಳಿ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಟ್ನಿಗಳಲ್ಲಿ, ಉಪ್ಪಿನಕಾಯಿಗಳಲ್ಲಿ, ಮಸಾಲೆಯುಕ್ತ ಆಹಾರಗಳಲ್ಲಿ ಬಳಸಲಾಗುತ್ತದೆ.
ಹೌದು ಹುಣಸೆ ಹಣ್ಣಿಗೆ ಅಡುಗೆ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಔಷಧ ಕಾರ್ಖಾನೆಗಳವರೆಗೆ ಉತ್ತಮ ಬೇಡಿಕೆ ಇದೆ. ಆದರೆ ಈ ಬೆಳೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದೊಂದು ರೀತಿಯಲ್ಲಿ ಸದ್ದಿಲ್ಲದೆ ಆದಾಯ ಮಾಡುವ ವಿಧಾನ. ಹಿಂದಿನ ಕಾಲದಲ್ಲಿ ಊರ ಹೊರಗಿನ ಅಥವಾ ವ್ಯವಸಾಯ ಮಾಡಲಾಗದ ಪ್ರದೇಶಗಳಲ್ಲಿ ಹುಣಸೆ ಮರಗಳನ್ನು ಬೆಳೆಸಲಾಗುತ್ತಿತ್ತು, ರಾಜ- ಮಹಾರಾಜರು, ಜಮೀನ್ದಾರರು, ಪಾಳೇಗಾರರು ಹತ್ತಾರು ಹುಣಸೆ ತೋಪುಗಳನ್ನು ಹೊಂದಿರುತ್ತಿದ್ದರು. ಏಕೆಂದರೆ ಯಾವುದೇ ಗೊಬ್ಬರ ಅಥವಾ ಇನ್ನೀತರ ಖರ್ಚು ಇಲ್ಲದೆ ಸ್ವಾಭಾವಿಕವಾಗಿ ಈ ಬೆಳೆಯನ್ನು ಬೆಳೆಯಲಾಗುತ್ತದೆ.
ನಿರ್ಲಕ್ಷಿತ ಪ್ರದೇಶದಲ್ಲಷ್ಟೇ ಬೆಳೆಯುತ್ತಾರೆ ಹುಣಸೆ
ಸ್ವಾಭಾವಿಕವಾಗಿ ಬೆಳೆಯುವ ಹುಣಸೆ ಮರಗಳನ್ನು ಮೊದಲೆಲ್ಲಾ ರಸ್ತೆ ಬದಿಗಳಲ್ಲಿ, ಕೆರೆ ಕಟ್ಟೆಗಳ ಬಳಿ, ಇಲ್ಲಾ ಸ್ಮಶಾನಗಳ ಬಳಿ, ಪಾಳು ಭೂಮಿಗಳಲ್ಲಿ, ಗೋಮಾಳ, ಕರಾಬುಗುಟ್ಟೆಯಂತಹ ಪ್ರದೇಶಗಳಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು.
ಫೆಬ್ರವರಿಯಿಂದ ಏಪ್ರಿಲ್ವರೆಗೆ ಹುಣಸೆ ದರ್ಬಾರ್
ಸಾಮಾನ್ಯವಾಗಿ ಫೆಬ್ರವರಿಯಿಂದ ಹುಣಸೆ ಫಲಸು ಆರಂಭವಾಗುತ್ತದೆ. ಈ ವೇಳೆ ಎಲ್ಲೆಡೆ ಹುಣಸೆ ಕಟಾವು ಆರಂಭವಾಗಿ ಏಪ್ರಿಲ್ವರೆಗೆ ಕಟಾವು ಕೆಲಸ ನಡೆಯುತ್ತದೆ. ಏಪ್ರಿಲ್ ನಂತರ ಮರದಲ್ಲಿರುವ ಎಲೆ ಎಲ್ಲಾ ಹಣ್ಣಾಗಿ ಉದುರುತ್ತವೆ ನಂತರ ಹೊಸ ಚಿಗುರು ಸಮೇತ ಹೂ ಬಿಟ್ಟು ಜೂನ್-ಜುಲೈ ತಿಂಗಳಲ್ಲಿ ಹುಣಸೆ ಕಾಯಿಗಳು ಸಣ್ಣ ಗಾತ್ರದಲ್ಲಿ ಕಾಣಿಸುತ್ತದೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ದಿನಕ್ರಮೇಣ ಕಾಯಿ ಬೆಳೆದು ದೊಡ್ಡ ಗಾತ್ರದಲ್ಲಿ ಕಾಣಿಸತೊಡಗುತ್ತವೆ. ಈ ವೇಳೆ ಹಳ್ಳಿಗಳಲ್ಲಿ ಹುಣಸೆ ಚಿಗುರು ಹಾಗೂ ಹುಣಸೆ ಹೂವಿನಿಂದ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ.
ರಾಜ್ಯ ಹೊರ ರಾಜ್ಯಗಳ ವ್ಯಾಪಾರಿಗಳಿಂದ ಭರ್ಜರಿ ಬೇಡಿಕೆ
ಹುಣಸೆ ಫಸಲು ಬಿಡುವ ಕಾಲಕ್ಕೆ ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬಂದು ಸ್ಥಳೀಯ ರೈತರ ಸಂಪರ್ಕ ಮಾಡಿ ದಲ್ಲಾಳಿಗಳ ಸಮೇತ ವ್ಯಾಪಾರಸ್ಥರು ವ್ಯಾಪಾರಕ್ಕೆ ಇಳಿಯುತ್ತಾರೆ. ಹೊರ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತಮಿಳುನಾಡು, ಕೇರಳ, ರಾಜ್ಯಗಳಿಂದ ವ್ಯಾಪಾರಸ್ಥರು ಬಂದು ಬೇಡಿಕೆಗೆ ತಕ್ಕಂತೆ ವ್ಯಾಪಾರ ಮಾಡಿ ಮುಂಗಡ ಹಣ ಪಾವತಿಸಿ ಹೋಗುತ್ತಾರೆ. ನಂತರ ಕಟಾವು ಮಾಡುವ ಸಮಯದಲ್ಲಿ ಬಂದು ರೈತರಿಗೆ ಬಾಕಿ ಹಣ ಪಾವತಿ ಮಾಡಿ ಹೋಗುತ್ತಾರೆ.
ಹುಣಸೆ ಕಟಾವು ವೇಳೆಯಲ್ಲಿ ನೂರಾರು ಜನರಿಗೆ ಕೂಲಿ ಕೆಲಸ ಸಿಗುತ್ತದೆ
ರೈತರ ಕೃಷಿ ಚಟುವಟಿಕೆಗಳು ಮುಗಿದ ನಂತರ ಬರುವ ಹುಣಸೆ ಫಸಲು, ರೈತರು ಖಾಲಿಯಾಗಿರುವ ಸಮಯದಲ್ಲಿ ರೈತರಿಗೆ ಮತ್ತೆ ಕೆಲಸ ಕೊಡುತ್ತದೆ. ಹುಣಸೆ ಫಸಲು ಕಟಾವು ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಬಂದು, ಅಲ್ಲೇ ಟೆಂಟ್ಗಳನ್ನು ಹಾಕಿಕೊಂಡು ಹುಣಸೆ ಫಸಲು ಕಟಾವು ಮಾಡಿ ಅದನ್ನು ಬೇರ್ಪಡಿಸಿ, ಹಸನು ಮಾಡುತ್ತಾರೆ. ಎರಡು ತಿಂಗಳ ಕಾಲ ಇದು ನೂರಾರು ಜನರ ರೈತರಿಗೆ ಕೆಲಸ ನೀಡುತ್ತದೆ.