ಲಕ್ನೋ: ಉತ್ತರಪ್ರದೇಶದ ಬಹ್ರೇಚ್ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿರುವ ನರಭಕ್ಷಕ ತೋಳಗಳ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಿದೆ.
ಈ ಭಾಗದಲ್ಲಿ ಒಟ್ಟು ಆರು ತೋಳ ಸಂಚರಿಸುತ್ತಿದ್ದವು. ಆಪರೇಷನ್ ಭೇಡಿಯಾ ಭಾಗವಾಗಿ ನಾಲ್ಕು ತೋಳ ಸೆರೆಹಿಡಿಯಲಾಗಿತ್ತು. ಆದರೆ ಉಳಿದ ಎರಡು ತೋಳಗಳು ಸಿಗುತ್ತಿಲ್ಲ. ಸೋಮವಾರ ರಾತ್ರಿಯೂ ತೋಳದ ದಾಳಿಗೆ ಬಾಲಕಿ ಗಾಯಗೊಂಡಿದ್ದಾಳೆ. ಈವರೆಗೂ ತೋಳದ ದಾಳಿಗೆ 9 ಮಕ್ಕಳು ಸೇರಿ, 10 ಮಂದಿ ಬಲಿಯಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತೋಳಗಳನ್ನು ಪತ್ತೆಹಚ್ಚಲು, ಅರಣ್ಯ ಇಲಾಖೆ ಮತ್ತು ಉತ್ತರ ಪ್ರದೇಶ ಪೊಲೀಸರು ‘ಆಪರೇಷನ್ ಭೇಡಿಯಾ’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಪ್ರದೇಶವನ್ನು ಏಳು ವಲಯಗಳಾಗಿ ವಿಂಗಡಿಸಲಾಗಿದ್ದು, ಅಧಿಕಾರಿಗಳು ನಿಗಾ ವಹಿಸಿದ್ದಾರೆ.