ಬೆಂಗಳೂರು: ದಿನದಿಂದ ದಿನಕ್ಕೆ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಅಕ್ಕಿಯ ಬೆಲೆ ಗಗನ ಕುಸುಮವಾಗ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ರೂ.29ಕ್ಕೆ ಒಂದು ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾರತ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಇಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಬಿಎಸ್ ಯಡಿಯೂರಪ್ಪ ಭಾರತ್ ಬ್ರಾಂಡ್ ಅಕ್ಕಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದಿನಿಂದ ಭಾರತ್ ಬ್ರಾಂಡ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಒಂದು ಕೆಜಿಗೆ ರೂ.29ರಂತೆ ಅಕ್ಕಿಯನ್ನು ವಿತರಣೆ ಮಾಡುತ್ತಿದೆ.
ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ ಬಳಿಕ, ಪ್ರಾಥಮಿಕವಾಗಿ ಮಂಗಳವಾರ ಬೆಂಗಳೂರಿನಲ್ಲಿ ಮಾತ್ರ ಸಿಗಲಿದ್ದು, ನಗರದ ವಿವಿಧೆಡೆ ಭಾರತ್ ಅಕ್ಕಿ ವಾಹನಗಳು ಸಂಚರಿಸಿ ಅಕ್ಕಿ ಮಾರಲಿವೆ. ಬುಧವಾರದಿಂದ ಮಂಡ್ಯದಲ್ಲಿ ಹಾಗೂ ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲಿ ಗ್ರಾಹಕರಿಗೆ ಲಭ್ಯವಾಗೋ ಸಾಧ್ಯತೆ ಇದೆ.
ಬಿಗ್ ಬಾಸ್ಕೆಟ್, ಪ್ಲಿಪ್ಕಾರ್ಟ್, ರಿಲೈಯನ್ಸ್ ಸ್ಟೋರ್ಸ್, ಸ್ಟಾರ್ ಹೈಪರ್ ಬಝಾರ್ಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳವಾರ ಸಂಜೆಯಿಂದ ರಿಲೈಯನ್ಸ್ ಸ್ಟೋರ್ಸ್ಗಳಲ್ಲಿ ಈ ಅಕ್ಕಿ ಸಿಗಲಿದೆ. ಇನ್ನೊಂದು ವಾರದ ಬಳಿಕ ಇತರೆ ಸ್ಟೋರ್ಸ್ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.