ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಬದಲಿಸಬೇಕು ಎಂದು ಸಮರ ಸಾರಿ, ಭಿನ್ನಮತೀಯರ ಗುಂಪು ಕಟ್ಕೊಂಡು ದೆಹಲಿ ಯಾತ್ರೆ ಮಾಡಿದ್ದ ಯತ್ನಾಳ್ಗೆ ಹೈಕಮಾಂಡ್ ಶಾಕ್ ಕೊಟ್ಟಿತ್ತು. ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿತ್ತು.
ವಾಟ್ಸಾಪ್ʼನಲ್ಲಿ ಫೇಕ್ ನಂಬರ್ ಪತ್ತೆ ಮಾಡುವುದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಇದೀಗ ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಯತ್ನಾಳ್ 9 ಪುಟಗಳ ಉತ್ತರ ನೀಡಿದ್ದಾರೆ. ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ. ಇದರೊಂದಿಗೆ, ನೋಟಿಸ್ ದೊರೆತ 72 ಗಂಟೆಗಳ ಒಳಗಾಗಿಯೇ ಅವರು ಉತ್ತರ ನೀಡಿದಂತಾಗಿದೆ. ಶಿಸ್ತು ಸಮಿತಿಯ ನೋಟಿಸ್ಗೆ ಉತ್ತರ ನೀಡುವುದಕ್ಕೆ ಏನೂ ಇಲ್ಲ ಎಂದು ಯತ್ನಾಳ್ ಕೆಲವು ದಿನಗಳ ಹಿಂದೆ ಹೇಳಿದ್ದರು.
ಯತ್ನಾಳ್ ನೀಡಿದ ಉತ್ತರವೇನು?
ಬಿಜೆಪಿ ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ ನೀಡಿರುವ ಉತ್ತರವೇನು ಎಂಬುದರ ವಿವರ ಸದ್ಯ ಬಹಿರಂಗವಾಗಿಲ್ಲ. ಆದಾಗ್ಯೂ, ವಿಜಯೇಂದ್ರ ವಿರುದ್ಧ ದೂರುಗಳ ಸರಮಾಲೆಯನ್ನೇ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ. ಪಕ್ಷದ ಶಿಸ್ತನ್ನು ನಾನು ಉಲ್ಲಂಘಿಸಿಲ್ಲ’ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜಿಲ್ಲಾಧ್ಯಕ್ಷರುಗಳ ಆಯ್ಕೆಯಲ್ಲೂ ಹಿರಿಯರನ್ನು ವಿಶ್ವಾಸಕ್ಕೆ ತಗೊಂಡಿಲ್ಲ. ಪಕ್ಷ ಸಂಪೂರ್ಣವಾಗಿ ಅಪ್ಪ, ಮಗ, ಮಕ್ಕಳ ಕೈಯಿಗೆ ಹೋದ್ರೆ, ಪಕ್ಷಕ್ಕಾಗಿ ದುಡಿದವರು, ಹಿರಿಯರ ಪರಿಸ್ಥಿತಿ ಏನು..? ಇವಾಗಿನ ಅಧ್ಯಕ್ಷರು ಹಿರಿಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಸಾಲು ಸಾಲು ದೂರು ನೀಡಿದ್ದಾರೆ.
ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ವಕ್ಫ್ ಕುರಿತ ಹೋರಾಟವನ್ನು ಉನ್ನತ ನಾಯಕರು ಸಮರ್ಥಿಸಿದ್ದಾರೆ. ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾರ್ಯಕರ್ತರು, ನಾಯಕರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದು ಯತ್ನಾಳ್ ಉತ್ತರಿಸಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಉಲ್ಲೇಖಿಸಿರುವ ಯತ್ನಾಳ್ ಅವರು, ವಿ ಸೋಮಣ್ಣ ಸೇರಿದಂತೆ ಲಿಂಗಾಯತ ನಾಯಕರ ಸೋಲಿಗೆ ನೇರ ಕಾರಣ ವಿಜಯೇಂದ್ರ ಹಾಗೂ ಯಡಿಯೂರಪ್ಪ ಎಂದು ದೂರಿದ್ದಾರೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡೇ ಇವರನ್ನು ಸೋಲಿಸಿದ್ರು. ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ಲಿಂಗಾಯತ ಕ್ಷೇತ್ರಗಳಲ್ಲೇ ಸೋಲಾಗಿದೆ. ಯಡಿಯೂರಪ್ಪ ಜೊತೆ ಇದ್ದವರೇ ಸೋಲು ಕಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ವಕ್ಫ್ ಹೋರಾಟವನ್ನು ನಾವು ಪಕ್ಷದ ವೇದಿಕೆಯಲ್ಲೇ ಮಾಡಿದ್ದೇವೆ. ಈ ಹೋರಾಟಕ್ಕೆ ಕೇಂದ್ರದ ನಾಯಕರೇ ಖುದ್ದು ಶ್ಲಾಘಿಸಿದ್ದಾರೆ. ಪಕ್ಷದ ಹಿತಕ್ಕೆ ನಾವು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ನೀಡಿದ ಉತ್ತರವನ್ನು ನೀವು ಪರಿಗಣಿಸಬಹುದು. ನಾನು ಶಿಸ್ತು ಉಲ್ಲಂಘಿಸಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.