ಯಶ್ ಅವರ ಹುಟ್ಟು ಹಬ್ಬಕ್ಕಾಗಿ ರಾತ್ರಿ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಅವಘಡದಲ್ಲಿ ಪ್ರಾಣ ಬಿಟ್ಟಿರುವ ಅಭಿಮಾನಿಗಳ ಮನೆಗೆ ಯಶ್ ತಂಡದವರು ಭೇಟಿ ಕೊಟ್ಟು ಪರಿಹಾರ ಧನ ನೀಡಲಿದ್ದಾರೆ. ಇಂದು ಬೆಳಗ್ಗೆ ಯಶ್ ಟೀಮ್ ಆಯಾ ಕುಟುಂಬಗಳಿಗೆ ಭೇಟಿ ಮಾಡಿ, ಪರಿಹಾರದ ಧನವನ್ನು ಹಸ್ತಾಂತರ ಮಾಡಲಿದ್ದಾರೆ.
ಒಂದು ಕಡೆ ಯಶ್ ಪರಿಹಾರವನ್ನು ನೀಡುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಸರ್ಕಾರಕ್ಕೆ ಒತ್ತಾಯವೊಂದನ್ನು ಮಾಡಿದ್ದಾರೆ. ಸರ್ಕಾರ ಘೋಷಿಸಿದ 2 ಲಕ್ಷ ರೂಪಾಯಿ ಪರಿಹಾರ ಸಾಕಾಗಲ್ಲ. ಹೀಗಾಗಿ ಮೂವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಲಕ್ಷ್ಮೇಶ್ವರ ಸೂರಣಗಿ (Suranagi Village) ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಇಷ್ಟು ಮಾತ್ರವಲ್ಲದೇ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ 2 ಎಕರೆ ಜಮೀನು ನೀಡಬೇಕು. ಘಟನಾ ಸ್ಥಳದಲ್ಲಿ ಮೃತರ ಪುತ್ಥಳಿ ನಿರ್ಮಿಸಬೇಕು. ಮುಂದೆ ಇಂತಹ ಅವಘಡಗಳು ಸಂಭವಿಸಬಾರದು. ಅಲ್ಲದೆ ಈ ಮೂವರ ಪುತ್ಥಳಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು ಎಂದು ಸೂರಣಗಿ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬ (Yash Birthday) ಹಿನ್ನೆಲೆಯಲ್ಲಿ ಬೃಹತ್ ಗಾತ್ರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಹನುಮಂತ ಹರಿಜನ್ (24), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (20) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಂಜುನಾಥ್, ಪ್ರಕಾಶ್ ಹಾಗೂ ಹನುಮಂತ ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.