ಬಹಳ ರೋಚಕತೆಯಿಂದ ಕೂಡಿರುವ WPL ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಕಣಕ್ಕಿಳಿದಿವೆ.
ಇಂದಿನ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸುವ ಮೂಲಕ ಮಂಧಾನ ಪಡೆ ಎರಡನೇ ಸ್ಥಾನಕ್ಕೇರುವ ಗುರಿ ಹೊಂದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸುವ ಇರಾದೆಯಲ್ಲಿದೆ. ಅಲ್ಲದೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಡೆಲ್ಲಿ ತಂಡಕ್ಕೆ ನಾಕೌಟ್ ಹಂತಕ್ಕೆ ಹೋಗುವ ಅವಕಾಶವಿದ್ದರೆ, ಇತ್ತ ಆರ್ಸಿಬಿ ತಂಡಕ್ಕೆ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಅವಕಾಶವಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಬಹಳ ಮುಖ್ಯವಾಗಿದೆ.
ಇನ್ನು ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಅದರಂತೆ ಟಾಸ್ ಸೋತ ಆರ್ಸಿಬಿ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಇದುವರೆಗೆ ಮೂರು ಪಂದ್ಯಗಳು ನಡೆದಿವೆ . ಅಚ್ಚರಿಯ ಸಂಗತಿ ಎಂದರೆ ಇಲ್ಲಿಯವರೆಗೂ ದೆಹಲಿ ತಂಡವನ್ನು ಸೋಲಿಸುವಲ್ಲಿ ಬೆಂಗಳೂರು ತಂಡ ವಿಫಲವಾಗಿದೆ. ಅಂದರೆ ಮೂರರಲ್ಲಿ ಮೂರು ಪಂದ್ಯಗಳು ಡೆಲ್ಲಿ ಪರ ಸಾಗಿವೆ. ಹೀಗಾಗಿ ದೆಹಲಿ ವಿರುದ್ಧದ ಮೊದಲ ಗೆಲುವಿಗಾಗಿ ಬೆಂಗಳೂರು ಇನ್ನೂ ಕಾಯುತ್ತಿದೆ. ಕಳೆದ ಸೀಸನ್ನಲ್ಲಿ, ಈ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು, ಎರಡರಲ್ಲೂ ಡೆಲ್ಲಿ ಗೆದ್ದಿದೆ. ಈ ಸೀಸನ್ನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲೂ ಡೆಲ್ಲಿ ಗೆಲುವು ದಾಖಲಿಸಿದೆ. ಈ ಸೀಸನ್ನಲ್ಲಿ ಡೆಲ್ಲಿ ತಂಡ ತವರಿನಲ್ಲಿ ಬೆಂಗಳೂರು ತಂಡವನ್ನು ಸೋಲಿಸಿತ್ತು. ಹೀಗಾಗಿ ಆರ್ಸಿಬಿ ತಂಡ ಇದೀಗ ಡೆಲ್ಲಿಯನ್ನು ಅವರ ನೆಲದಲ್ಲಿ ಸೋಲಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಇರಾದೆಯಲ್ಲಿದೆ.