ಬೆಂಗಳುರು: ಪ್ರತಿವರ್ಷ ಸೆಪ್ಟೆಂಬರ್ 28ನ್ನು ವಿಶ್ವ ರೇಬಿಸ್ ದಿನವನ್ನು ಆಚರಿಸಲಾಗುತ್ತದೆ. ಸೆಪ್ಟೆಂಬರ್ 28ರಂದು ಮೊದಲ ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ರಸಾಯನಶಾಸ್ತ್ರಜ್ಞ ಹಾಗೂ ಸೂಕ್ಷ್ಮ ಜೀವಿ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ದಿನ. ಅವರ ನೆನಪಿಗಾಗಿ ಈ ದಿನವನ್ನು ವಿಶ್ವ ರೇಬೀಸ್ ದಿನ ಎಂದು ಆಚರಣೆಗೆ ತರಲಾಯಿತು. ಪ್ರತಿ ವರ್ಷ ಜಗತ್ತಿನಲ್ಲಿ ರೇಬಿಸ್ನಿಂದ ಸಂಭವಿಸುವ ಮರಣ 59 ಸಾವಿರ. ಅದರಲ್ಲಿ ಶೇ.90ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರದಿಯಾಗುತ್ತಿವೆ. ಹೀಗಾಗಿ ಪ್ರತಿ ವರ್ಷವೂ ಸೆಪ್ಟೆಂಬರ್ 28 ರಂದು ವಿಶ್ವಾದ್ಯಂತ ರೇಬಿಸ್ ದಿನವನ್ನು ಆಚರಿಸಿ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ರೇಬೀಸ್ ಎಂದರೇನು ?
ರೇಬೀಸ್ ಎಂದರೆ ಕೇಂದ್ರ ನರಮಂಡಲವನ್ನು ಹೊಡೆಯುವ ಗಂಭೀರವಾದ ವೈರಲ್ ಸೋಂಕು. ನೀವು ಲಸಿಕೆ (Vaccine) ಹಾಕದ ನಾಯಿಯಿಂದ ಕಚ್ಚಿಸಿಕೊಂಡರೆ, ರೇಬೀಸ್ ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಚಿಕಿತ್ಸೆ (Treatment) ನೀಡದಿದ್ದರೆ, ಸೋಂಕಿನ ಕೆಲವೇ ದಿನಗಳಲ್ಲಿ ಸಾವು (Death) ಕೂಡ ಸಂಭವಿಸಬಹುದು.ರೇಬಿಸ್ ಉಷ್ಣ ರಕ್ತದ ಪ್ರಾಣಿಗಳ ಗಂಭೀರ ಸೋಂಕು ಆಗಿದೆ. ನರಮಂಡಲಕ್ಕೆ ದಾಳಿಯಿಡುವ ವೈರಸ್ ನಿಂದ ರೇಬಿಸ್ ಉಂಟಾಗುತ್ತದೆ. ಇದೊಂದು ಮಾರಣಾಂತಿಕ ರೋಗವಾಗಿದೆ. ರೋಗಿ ರೇಬಿಸ್ಗೆ ತುತ್ತಾದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗುವುದಿಲ್ಲ.
ರೇಬಿಸ್ ಹೇಗೆ ಹರಡುತ್ತದೆ?
ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಪ್ರಾಣಿಗಳು ತಮ್ಮ ಪಂಜ ಅಥವಾ ಉಗುರುಗಳನ್ನು ನೆಕ್ಕುತ್ತಿರುವುದರಿಂದ ಅವುಗಳು ಪರಚಿದರೂ ಅಪಾಯಕಾರಿಯಾಗುತ್ತದೆ. ಗಾಯ ಅಥವಾ ಗೀರು ಅಥವಾ ಬಾಯಿ ಮತ್ತು ಕಣ್ಣುಗಳ ಲೋಳೆಯ ಪದರಗಳ ಮೂಲಕ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ. ಅಲ್ಲಿಂದ ಅದು ಮಿದುಳು (Brain) ಮತ್ತು ಮಿದುಳು ಬಳ್ಳಿ ಅಥವಾ ಬೆನ್ನುಹುರಿಗೆ ಸಾಗುತ್ತದೆ. ಸೋಂಕು ಮಿದುಳಿಗೆ ಹರಡಿದಾಗ ಅದು ಮಿದುಳಿನ ನರಗಳ ಮೂಲಕ ಶರೀರದಲ್ಲಿ ಇಳಿಯುತ್ತದೆ ಮತ್ತು ವಿವಿಧ ಅಂಗಾಂಗಗಳಿಗೆ ದಾಳಿಯಿಡುತ್ತದೆ. ರೇಬಿಸ್ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಅದನ್ನು ತಡೆಯಲು ಎಲ್ಲ ಪ್ರಯತ್ನಗಳು ಅಗತ್ಯ. ಸಾಕುನಾಯಿ (Pet dog) ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ (Health) ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು.
ರೇಬಿಸ್ ಲಕ್ಷಣಗಳು
ರೇಬಿಸ್ ಪೀಡಿತರಿಗೆ ಮೊದಲಿಗೆ ಮಿದುಳಿನ ಜೀವಕೋಶಗಳಿಗೆ ಊತವಾಗಬಹುದು. ಜ್ವರ (Fever) ಬರಬಹುದು. ಗಾಯದ ಬಳಿ ಸಂವೇದನೆ ಇಲ್ಲದಂತೆ ಆಗಬಹುದು. ಉದ್ರೇಕ ನಿಯಂತ್ರಿಸಲಾಗದೆ ಇರುವುದು, ನೀರಿನ ಭಯ, ದೇಹದ (Body) ಕೆಲವು ಭಾಗಗಳ ನಿಯಂತ್ರಣ ತಪ್ಪುವಿಕೆ, ಪ್ರಜ್ಞೆ ತಪ್ಪುವುದು ಇತ್ಯಾದಿಗಳು ರೇಬಿಸ್ ರೋಗದ ಲಕ್ಷಣಗಳಾಗಿವೆ. ನಾಯಿ ಕಚ್ಚಿದ ಬಳಿಕ ಜ್ವರ, ತಲೆನೋವು, ವಾಕರಿಕೆ, ವಾಂತಿ, ತಳಮಳ, ಆತಂಕ, ಗೊಂದಲ, ಅತಿಚಟುವಟಿಕೆ, ಜೊಲ್ಲು ಸುರಿಸುವುದು, ನೀರಿನ ಭಯ, ನಿದ್ರಾಹೀನತೆ ಇತ್ಯಾದಿಗಳು ಬಂದರೆ ರೇಬಿಸ್ ಸೋಂಕು ಹರಡಿದೆ ಎಂದರ್ಥ.
ವಿಶ್ವ ರೇಬಿಸ್ ದಿನದ ಥೀಮ್-ಒಂದು ಆರೋಗ್ಯ, ಶೂನ್ಯ ಸಾವು
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರೇಬಿಸ್ ದಿನ 2024ರ ಥೀಮ್ ‘ಒಂದು ಆರೋಗ್ಯ ಶೂನ್ಯ ಸಾವು’ ಎಂಬುದಾಗಿದೆ. ಇದರಲ್ಲಿ ಒನ್ ಹೆಲ್ತ್ ಎಂದರೆ ಒಂದೇ ಆರೋಗ್ಯ, ಅದರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚಿಸುತ್ತದೆ. ರೇಬಿಸ್ ತುಂಬಾ ಹಳೆಯ ರೋಗ. ಈ ರೋಗ ಚಕ್ರವನ್ನು ನಾಶ ಪಡಿಸಲು ಈಗ ಲಸಿಕೆ, ಔಷಧ, ತಂತ್ರಜ್ಞಾನ, ವೈದ್ಯಕೀಯ ಆವಿಷ್ಕಾರಗಳು ಸಾಕಷ್ಟು ಆಗಿವೆ. 2030ರ ವೇಳೆಗೆ ನಾಯಿ ಸೇರಿದಂತೆ ರೇಬಿಸ್ ಪೀಡಿತ ಪ್ರಾಣಿಗಳಿಂದ ಮನುಷ್ಯರ ಸಾವುಗಳನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿದೆ.
ರೇಬಿಸ್ ತಡೆಗಟ್ಟುವುದು ಹೇಗೆ ?
ಪ್ರತಿವರ್ಷ ಭಾರತದಲ್ಲಿ ರೇಬಿಸ್ನಿಂದ 20 ಸಾವಿರ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ರೇಬಿಸ್ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಹೀಗಾಗಿ ಮಕ್ಕಳನ್ನು ಶ್ವಾನಗಳಿಂದ ದೂರವಿಡಬೇಕು. ಬೀದಿನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು. ನಾಯಿಗಳ ಜತೆ ಮಕ್ಕಳು ಹೆಚ್ಚು ಆಟವಾಡುತ್ತಾರೆ. ನಾಯಿ ಅಥವಾ ಬೆಕ್ಕುಗಳನ್ನು ಕೆಣಕುವುದು ಇತ್ಯಾದಿಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ರೇಬಿಸ್ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ, ಮಕ್ಕಳಿಗೆ ಪ್ರಾಣಿಗಳ ವರ್ತನೆ ಕುರಿತು ಬಾಲ್ಯದಿಂದಲೇ ಹೇಳಿಕೊಡಬೇಕು.