ಬೆಂಗಳೂರು: ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನ ವನ್ನು ಆಚರಿಸಲಾಗುತ್ತದೆ. ಈ ದಿನ ಸರ್ಕಾರಗಳು, ಆರೋಗ್ಯ ವೃತ್ತಿಪರರು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ನ ಪಾರಂಭಿಕ ಹಂತದ ಬಗ್ಗೆ ತಿಳಿದುಕೊಂಡು ಅದಕ್ಕೆ ಸರಿಯಾದ ಸೂಕ್ತ ಚಿಕಿತ್ಸೆಗಳನ್ನು ನೀಡುವ ಮೂಲಕ ವ್ಯಕ್ತಿಯನ್ನು ಕಾನ್ಸರ್ ಮುಕ್ತರನ್ನಾಗಿಸಬಹುದು ಎಂಬುದರ ಕುರಿತು ಅರಿವು ಮೂಡಿಸಲಾಗುತ್ತದೆ.
ಜಗತ್ತಿನಾದ್ಯಂತ ವರ್ಷದಲ್ಲಿ 10 ಮಿಲಿಯನ್ ಜೀವಗಳು ಕಾನ್ಸರ್ನಿಂದ ಬಳಲಿ ಜೀವ ಕಳೆದುಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಚಿಕಿತ್ಸೆ ನೀಡುವ ಮೂಲಕ ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದೆ.
2025ರ ವಿಶ್ವ ಕ್ಯಾನ್ಸರ್ ದಿನದ ಧ್ಯೇಯ:
ಈ ಬಾರಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ 2023-2025ರವರೆಗೆ ಕ್ಲೋಸ್ ದಿ ಕೇರ್ ಗ್ಯಾಪ್ ಎನ್ನುವ ಥೀಮ್ ಮೂಲಕ ಆಚರಿಸಲಾಗುತ್ತಿದೆ. ಮೂರು ವರ್ಷಗಳ ಈ ಅವಧಿಯಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ, ಅದರ ಚಿಕಿತ್ಸೆಯ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ. ಜೊತೆಗೆ ಜಾಗತಿಕವಾಗಿ ಇರುವ ಅಸಮಾನತೆಯನ್ನು ಹೋಗಲಾಡಿಸಿ ಕ್ಯಾನ್ಸರ್ ರೋಗಿಗಳಲ್ಲಿ ಜೀವನೋತ್ಸಾಹ ತುಂಬುವ ಗುರಿಯನ್ನು ಈ ವರ್ಷ ಹೊಂದಿದೆ.
ವಿಶ್ವ ಕ್ಯಾನ್ಸರ್ ದಿನದ ಇತಿಹಾಸ:
ವಿಶ್ವ ಕ್ಯಾನ್ಸರ್ ದಿನವು ಫೆಬ್ರವರಿ 4, 2000 ವಿಶ್ವ ಶೃಂಗಸಭೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಶೃಂಗಸಭೆಯು ಪ್ಯಾರಿಸ್ ನಲ್ಲಿ ನಡೆಯಿತು ಮತ್ತು ಇದನ್ನು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಮೂಲಕ ಅಂತಾರಾಷ್ಟ್ರೀಯ ಕ್ಯಾನ್ಸರ್ ದಿನ ಆಚರಣೆಯನ್ನು ಜಾರಿಗೆ ತರಲಾಯಿತು. ಇದರ ಪ್ರಮುಖ ಉದ್ದೇಶ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ತಡೆಗಟ್ಟುವಿಕೆ, ಪತ್ತೆ ಮತ್ತು ಚಿಕಿತ್ಸೆಯನ್ನು ಉತ್ತೇಜಿಸಲು ಸ್ಥಾಪಿಸಲಾಯಿತು.
ವಿಶ್ವ ಕ್ಯಾನ್ಸರ್ ದಿನದ ಮಹತ್ವ:
ಕ್ಯಾನ್ಸರ್ ಜಾಗೃತಿಯನ್ನು ಉತ್ತೇಜಿಸಲು ಸಾರ್ವಜನಿಕ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಂತಹ ವಿವಿಧ ಚಟುವಟಿಕೆಗಳಿಂದ ವಿಶ್ವ ಕ್ಯಾನ್ಸರ್ ದಿನದ ಮಹತ್ವವನ್ನು ಹೊಂದಿದೆ. ಅಮೂಲ್ಯವಾದ ಜೀವಗಳನ್ನು ಉಳಿಸುವ ಉದ್ದೇಶದಿಂದ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಕ್ಯಾನ್ಸರ್ ಗೆ ಕಾರಣಗಳೇನು?: ಕ್ಯಾನ್ಸರ್ ಬೆಳೆಯಲು ಬಲವಾದ ಕಾರಣವಿಲ್ಲ. ಆದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ವಿಷಕಾರಿ ಜೀವನಶೈಲಿಯ ಅಭ್ಯಾಸಗಳಂತಹ ಕೆಲವೊಂದು ಅಂಶಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲೇಬೇಕು.
ತಂಬಾಕು: ತಂಬಾಕಿನಲ್ಲಿ ಕಂಡುಬರುವ ನಿಕೋಟಿನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹಲವಾರು ವರದಿಗಳು ಹೇಳುತ್ತವೆ.
ಆಹಾರಗಳು: ಸಂರಕ್ಷಕಗಳು, ಕೀಟನಾಶಕಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳೊಂದಿಗೆ ಸರ್ವ್ ಮಾಡಿದ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಉಂಟುಮಾಡುತ್ತವೆ. ಇಂತಹ ಆಹಾರಗಳನ್ನು ತ್ಯಜಿಸುವುದರಿಂದ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡಬಹುದು.
ವಂಶವಾಹಿಗಳು: ಕೆಲವು ಕ್ಯಾನ್ಸರ್ ಗಳು ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರಿದರೆ, ಕೆಲವು ವಿಧದ ಕ್ಯಾನ್ಸರ್ ಗಳು ಅನುವಂಶೀಯವಾಗಿರುತ್ತವೆ. ಕುಟುಂಬದಲ್ಲಿ ದೋಷಪೂರಿತವಾಗಿರುವ ಜೀನ್ ಗಳು ಇದ್ದರೆ ಅದು ಕ್ಯಾನ್ಸರ್ ಗೆ ಕಾರಣವಾಗಬಹುದು.
ವಿಕಿರಣ: ವಿಕಿರಣವು ಕಣಗಳನ್ನು ಬೇರ್ಪಡಿಸಬಹುದು ಮತ್ತು ಜೀವಕೋಶಗಳಲ್ಲಿ ಡಿಎನ್ ಎ ಹಾನಿಯನ್ನು ಉಂಟುಮಾಡಬಹುದು, ಇದು ಕ್ಯಾನ್ಸರ್ ನಂತಹ ತೀವ್ರ ಕಾಯಿಲೆಯನ್ನು ಉಂಟುಮಾಡಬಹುದು. ನೀವು ವಿಕಿರಣಕ್ಕೆ ಒಡ್ಡಿಕೊಂಡಿರುವುದರಿಂದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಭಾವಿಸಿದ್ದರೆ ವೈದ್ಯರೊಂದಿಗೆ ಮಾತನಾಡಿ.
ಜಡ ಜೀವನಶೈಲಿ: ಕಡಿಮೆ ಅಥವಾ ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿಯನ್ನು ನಡೆಸುವುದರಿಂದ ಕ್ಯಾನ್ಸರ್ ನಂತಹ ದೀರ್ಘಕಾಲೀನ ಕಾಯಿಲೆಗೆ ಕಾರಣವಾಗಬಹುದು. ವ್ಯಾಯಾಮ, ನೃತ್ಯ, ಏರೋಬಿಕ್ಸ್ ಮುಂತಾದ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಿ.
ಕ್ಯಾನ್ಸರ್ ನ ಲಕ್ಷಣಗಳೇನು? ಜಗತ್ತಿನಲ್ಲಿ ಹಲವಾರು ಬಗೆಯ ಕ್ಯಾನ್ಸರ್ ಗಳು ಇರುವ ಕಾರಣ, ಒಂದೊಂದು ಬಗೆಯ ಕ್ಯಾನ್ಸರ್ ನ ಲಕ್ಷಣಗಳು ಬದಲಾಗುತ್ತವೆ. ಆದರೆ, ಕೆಲವು ವಿಧದ ಕ್ಯಾನ್ಸರ್ ಗಳು ಸಾಮಾನ್ಯ ಚಿಹ್ನೆಗಳನ್ನು ಹೊಂದಿದ್ದು, ಅವುಗಳು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ತೀವ್ರ ತೂಕ ನಷ್ಟ, ವಿಪರೀತ ಆಯಾಸ, ಮೂತ್ರಕೋಶ ಮತ್ತು ಕರುಳಿನ ಕಾರ್ಯನಿರ್ವಹಿಸುವಲ್ಲಿ ಬದಲಾವಣೆಗಳು, ತೀವ್ರವಾದ ಚರ್ಮದ ಬದಲಾವಣೆಗಳು, ತೀವ್ರ ನೋವುಆದರೆ, ಈ ಮಾರಕ ರೋಗದ ವಿರುದ್ಧ ಹೋರಾಡಲು ಮತ್ತು ಗೆಲ್ಲಲು ಸಾಧ್ಯವಿರುವ ಏಕೈಕ ಮಾರ್ಗವೆಂದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು. ತಜ್ಞರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ಸಲಹೆ ಮತ್ತು ಸಹಾಯ ವನ್ನು ಪಡೆದುಕೊಳ್ಳಿ.