ಬೆಂಗಳೂರು: ನಿಗಮ ಮಂಡಳಿಗಳಲ್ಲಿ (Corporation Board) ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸ್ಥಾನಮಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರಿನ (Bengaluru) ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಎಲ್ಲಾ ನಾಯಕರು ಕೂತು ಚರ್ಚೆ ಮಾಡುತ್ತೇವೆ. ನೇಮಕದ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಕೇಂದ್ರ ನಾಯಕರು ಕೂಡಾ ಕೆಲವರಿಗೆ ಅಧಿಕಾರ ನೀಡುವ ಮಾತು ನೀಡಿರುತ್ತಾರೆ. ಅದಕ್ಕಾಗಿ ಎಲ್ಲರ ಜೊತೆ ಚರ್ಚೆ ಮಾಡಬೇಕು. ಸಂಕ್ರಾಂತಿ ಹಬ್ಬದ ವೇಳೆಗೆ ನಿಗಮ ಮಂಡಳಿ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಇದೆ ಎಂದರು
ಜನಸಾಮಾನ್ಯರು ತಮ್ಮ ಕಷ್ಟಗಳನ್ನು ತೆಗೆದುಕೊಂಡು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರ ಕಷ್ಟಗಳನ್ನು ಕೇಳಲು ನಾವೇ ಅವರ ಬಳಿ ಹೋಗಬೇಕು. ಅವರ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ತಿಂಗಳು ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರಗಳ ಜನರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಮಧ್ಯೆ ದೆಹಲಿ ಹಾಗೂ ಬೇರೆ ಕಡೆ ಪ್ರವಾಸ ಮಾಡುವ ವೇಳೆ ಈ ಕಾರ್ಯಕ್ರಮಕ್ಕೆ ಬಿಡುವು ನೀಡಲಾಗಿದೆ. ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಸಂಸದರು ಭಾಗವಹಿಸಲು ಆಹ್ವಾನ ನೀಡುತ್ತೇವೆ ಎಂದು ತಿಳಿಸಿದರು