ಚಿತ್ರದುರ್ಗ : ಊಟ ತರಲು ಹೋಗುತ್ತಿದ್ದಾಗ ಅಮಾಯಕ ಕೂಲಿ ಕಾರ್ಮಿಕನ ಮೇಲೆ ಮೂರು ನಾಯಿಗಳು ದಾಳಿ ನಡೆಸಿ, ಕಾರ್ಮಿಕನನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಂದಿಹಳ್ಳಿ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಶಿರಾ ತಾಲೂಕಿನ ಯರದಕಟ್ಟೆ ಗ್ರಾಮದ ಮಧು (23) ವರ್ಷ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ತಾಲೂಕಿನ ನಂದಿಹಳ್ಳಿ ಬಳಿ ಇರುವ ಖಾಸಗಿ ಅಸೆಂಟ್ ಪಿಯು ಕಾಲೇಜು ಶಿಕ್ಷಣ ಸಂಸ್ಥೆಯ ಮಾಲೀಕನಿಗೆ ಸೇರಿದ ನಾಯಿಗಳು ವ್ಯಕ್ತಿಯ ಬಲಗೈ, ಬೆನ್ನು, ತೊಡೆ ಸೇರಿದಂತೆ ಇನ್ನಿತರ ಭಾಗಗಳಿಗೆ ಕಚ್ಚಿ ಮನಸೋ ಇಚ್ಛೆ ಬಂದಂತೆ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿದ್ದು, ನಾಯಿಯ ದಾಳಿಗೆ ಒಳಗಾಗಿರುವ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಗಾಯಗೊಂಡ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲಿಸಲಾಗಿದೆ. ಗಾಯಾಳು ಶಿರಾ ತಾಲೂಕಿನಿಂದ ನಂದಿಹಳ್ಳಿ ಬಳಿ ಕೆಲಸಕ್ಕೆ ಬಂದಿದ್ದನು. ಊಟ ತರಲು ನಂದಿಹಳ್ಳಿ ಕಡೆಯಿಂದ ಆದಿವಾಲ ಕಡೆಗೆ ನಡೆದು ಕೊಂಡು ಬರುವಾಗ ಪಿಯು ಕಾಲೇಜಿನ ಸಂಸ್ಥೆಯ ಮಾಲೀಕನ ನಾಯಿಗಳು ದಾಳಿ ನಡೆಸಿವೆ. ಕಾರ್ಮಿಕನ ಕಿರುಚಾಟ ಕೇಳಿ ವಾಹನ ಸವಾರರು ಗಾಯಾಳುವನ್ನು ರಕ್ಷಿಸಿದ್ದಾರೆ. ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇರಬೇಕಿದ್ದ ನಾಯಿಗಳು ರಸ್ತೆಗೆ ಬಂದು ಅಮಾಯಕನ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಸಂಸ್ಥೆಯ ಕಾರ್ಯದರ್ಶಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಬಳಿ ಬಂದು ಗಾಯಳನ್ನು ನೋಡುತ್ತಾ ನಿಂತಿದ್ದ ಸಂಸ್ಥೆಯ ಟ್ರಸ್ಟಿ ಮೂರ್ತಿ ಅವರನ್ನು ಅಲ್ಲಿದ್ದ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮಾಯಕನ ಜೀವಕ್ಕೆ ಹೆಚ್ಚು ಕಡಿಮೆ ಆದರೆ ನೀವೇ ಹೊಣೆಗಾರರು, ಜೊತೆಗೆ ನಿಮ್ಮ ಶಿಕ್ಷಣ ಸಂಸ್ಥೆಯನ್ನು ಮುಚ್ಚಿ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಸಂಸ್ಥೆಯ ಮಾಲೀಕರು ಗಾಯಾಳುವಿನ ಚಿಕಿತ್ಸೆ ವೆಚ್ಚ ಭರಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.