ಬೆಂಗಳೂರು:- ರಾಜ್ಯದ ಮಹಿಳೆಯರಿಗೆ ಮೊದಲು ರಕ್ಷಣೆ ನೀಡುವ ಕೆಲಸ ಮಾಡಿ ಎಂದು ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ.
ಶಕ್ತಿ ಯೋಜನೆಗಾಗಿ ಹಗಲು ರಾತ್ರಿ ಶ್ರಮಿಸುವ ಮಹಿಳಾ ಕಂಡಕ್ಟರ್ಗೆ ಅಧಿಕಾರಿಗಳಿಂದ ಟಾರ್ಚರ್ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡುವುದು, ಮಹಿಳೆಯರ ಮೂಗನ್ನು ಕತ್ತರಿಸುವುದು, ಮಹಿಳಾ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು, ಮಹಿಳೆಯರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು, ಇವೇ ಕಾಂಗ್ರೆಸ್ ಸರ್ಕಾರದ ಅಸಲಿ ಮಹಿಳಾ ಸಬಲೀಕರಣ ನೀತಿಗಳು ಎಂದು ಕಿಡಿಕಾರಿದೆ.
ಬಿಎಂಟಿಸಿ ಮಹಿಳಾ ಕಂಡಕ್ಟರ್ಗೆ ಅವರ ಮೇಲಧಿಕಾರಿಗಳು ಇನ್ನಿಲ್ಲದಂತೆ ನೀಡಿದ ಕಿರುಕುಳದ ಬಗ್ಗೆ ದೂರು ನೀಡಿ ನಾಲ್ಕು ದಿನಗಳಾದರೂ ಯಾವುದೇ ಕ್ರಮವಿಲ್ಲ, ಕನಿಷ್ಟ ದೂರು ನೀಡಿದ ಮಹಿಳೆಗೆ ಸಾಂತ್ವನವೂ ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರೇ, ಇದೇನಾ ನೀವು ಮಹಿಳೆಯರಿಗೆ ನೀಡಿದ “ಶಕ್ತಿ” ಎಂದು ಪ್ರಶ್ನೆ ಮಾಡಿದೆ.
ಡಿಪೋ ಮ್ಯಾನೇಜರ್ ಎಂ.ಕೃಷ್ಣಪ್ಪ ಅವರು ಬೇಗ ಬಂದರೂ ಲೇಟ್ ಆಗಿ ಡ್ಯೂಟಿ ನೀಡುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಟಾರ್ಚರ್ ನೀಡುತ್ತಿದ್ದಾರೆ ಅಂತ ಆರೋಪ ಮಾಡಲಾಗಿದೆ. ಡಿಪೋದ ಇತರೆ ಅಧಿಕಾರಿಗಳ ಗಮನಕ್ಕೂ ತಂದರೂ ಅವರಿಂದಲೂ ಟಾರ್ಚರ್ ಅಂತೆ. ಅಧಿಕಾರಿಗಳ ಟಾರ್ಚರ್ಗೆ ರೋಸಿ ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ.