ಬೆಂಗಳೂರು:– ರೈತರಿಗೆ ನೆರವಿನ ಜತೆಗೆ ಆತ್ಮವಿಶ್ವಾಸ ತುಂಬುವುದು ಅವಶ್ಯಕ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿ, ರೈತರನ್ನು ಸಬಲೀಕರಣ ಗೊಳಿಸಲು ಎಲ್ಲ ತಾಂತ್ರಿಕ, ವೈಜ್ಞಾನಿಕ ನೆರವನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು.
ಕೃಷಿ, ಜಲಾನಯನ ಇಲಾಖೆಗಳು, ವಿಶ್ವವಿದ್ಯಾನಿಲಗಳ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರೈತರಿಗೆ ವಿವಿಧ ಯೋಜನೆಗಳ ನೆರವಿನ ಜತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ವಿದ್ಯಾನಿಲಯಗಳು ರೈತರಿಗೆ ಆಪ್ತವಾಗಬೇಕು, ಕೃಷಿ ವಿಜ್ಞಾನಿಗಳನ್ನು ತಯಾರು ಮಾಡುವುದರ ಜತೆಯಲ್ಲಿ ಯಶಸ್ವಿ ಸಂಶೋಧನೆಗಳ ಫಲವನ್ನು ಸಕಾಲದಲ್ಲಿ ರೈತರಿಗೆ ತಲುಪಿಸಬೇಕು ಎಂದರು.
ರೈತರಿಗೆ ಸಕಾಲದಲ್ಲಿ ಬೆಳೆ ವಿಮೆ ಹಣ ಒದಗಿಸಬೇಕು .ಇದಕ್ಕೆ ಇಲಾಖಾ ಅಧಿಕಾರಿಗಳು ವಿಮಾ ಕಂಪನಿಗಳ ಜತೆ ಸಮನ್ವಯ ಮಾಡಿ ಕೃಷಿಕರಿಗೆ ನೆರವಾಗಿ ಎಂದರು.
ಬೆಳೆ ಸಮೀಕ್ಷೆ ಶೇ.100 ರಷ್ಟು ಪೂರ್ಣ ಆಗಬೇಕು, ಬೆಳೆ ಹಾನಿ ವರದಿ ವೇಳೆ ಅಧಿಕಾರಿ, ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ಕೃಷಿ ವಿಚಕ್ಷಣಾ ದಳ ಚುರುಕಾಗಿ ಕೆಲಸ ಮಾಡಬೇಕು.ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ನಿಗಾವಹಿಸಿ, ನಕಲಿ ರಸಗೊಬ್ಬರ ಬಿತ್ತನೆ ಬೀಜ ಮಾರಾಟ, ಸಾಗಾಟದ ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮವಹಿಸಿ ಎಂದು ನಿರ್ದೇಶನ ನೀಡಿದರು.
ರೈತರ ಅನುಕೂಲದ ದೃಷ್ಠಿಯಿಂದ ಕೃಷಿ ಯಾಂತ್ರೀಕರಣ, ಕೃಷಿ ಭಾಗ್ಯ ಯೋಜನೆ ಚುರುಕು ಮಾಡಿ. ಕೃಷಿ ಹಾಗೂ ಕಂದಾಯ ಇಲಾಖೆ ಅನುದಾನದಲ್ಲಿ ಈ ಸಾಲಿನಲ್ಲಿ ಒಟ್ಟು 32,000 ಕೃಷಿ ಹೊಂಡ ನಿರ್ಮಾಣ ಪೂರ್ಣ ಗೊಳಿಸಿ ಎಂದು ತಿಳಿಸಿದರು.
ನೆಟೆ ರೋಗ ಬಾಕಿ ಪರಿಹಾರ ಆದಷ್ಟು ಬೇಗ ರೈತರ ಖಾತೆಗೆ ವರ್ಗಾವಣೆ ಮಾಡಿ ಎಂದು ತಾಕೀತು ಮಾಡಿದರು. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಜಿಲ್ಲೆಗಳ ಬಗ್ಗೆ ನೋಡಲ್ ಅಧಿಕಾರಿಗಳು ಕಾಲಮಿತಿಯೊಳಗೆ ಶೇ.100 ಗುರಿ ಸಾಧನೆಗೆ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.