ಮಂಡ್ಯ : ಮದ್ದೂರು ಪಟ್ಟಣದ ಶ್ರೀ ಸೋಮೇಶ್ವರ ಸಮುದಾಯ ಭವನದ ಹಿಂಭಾಗದ ಕೊಲ್ಲಿ ಹಳ್ಳದಲ್ಲಿ ಸೋಮವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಲ್ಲಿ ಹಳ್ಳದ ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದವರು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದು ಅನುಮಾನಾಸ್ಪದವಾಗಿ ತೇಲಾಡುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಸ್ಥಳೀಯರಿಗೆ ಮತ್ತು ಮದ್ದೂರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಚೀಲವನ್ನು ಹೊರತೆಗೆದು ನೋಡಿದಾಗ ಅಂದಾಜು 35 ವರ್ಷ ವಯಸ್ಸಿನ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಮಹಿಳೆಯನ್ನು ಕೊಲೆ ಮಾಡಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಮಲಗಿಸಿ ತಲೆ, ಎದೆ ಹಾಗೂ ಕಾಲುಗಳಿಗೆ ಕಲ್ಲುಗಳನ್ನು ಕಟ್ಟಿ ಪ್ಲಾಸ್ಟಿಕ್ ಚೀಲವನ್ನು ಸುತ್ತಿ ಕೊಲ್ಲಿ ಹಳ್ಳದಲ್ಲಿ ಎಸೆದು ಹೋಗಿದ್ದಾರೆ.
ಮಹಿಳೆಯ ಶವವು ಗುರುತು ಸಿಗದಷ್ಟು ಕೊಳೆತು ಹೋಗಿದೆ. ಶವವನ್ನು ಮದ್ದೂರು ಪೋಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಸ್ಥಳಕ್ಕೆ ಮಂಡ್ಯ ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ ಹಾಗೂ ಸಿಪಿಐ ಶಿವಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ