ಮಂಡ್ಯ:- ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಜೆಡಿಎಸ್ ಹರಸಾಹಸ ಮಾಡ ಬಹುದು. ಆದರೆ ಜೆಡಿಎಸ್ನ ಕಡುವೈರಿ ಎಂದೇ ಬಿಂಬಿತ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಇಡೀ ಕ್ಷೇತ್ರದ ಚಿತ್ರಣ ವನ್ನೇ ಬದಲಾಯಿಸಬಹುದು. ಸುಮಲತಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧ ರಾಗಿದ್ದಾರೆ ಎಂದೂ ಹೇಳಲಾಗುತ್ತದೆ.
ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿ ಸಿದ್ದ ಸುಮಲತಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪರಿಣಾಮವಾಗಿ ಈ ಕ್ಷೇತ್ರ ಜೆಡಿಎಸ್ ಪಾಲಾಗುವುದು ಬಹುತೇಕ ಖಚಿತ. ಹೀಗಾಗಿಯೇ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವನ್ನು ಸುಮಲತಾ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಅಲ್ಲದೆ, ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮತ್ತೂಂದೆಡೆ ಸುಮಲತಾ ಕಾಂಗ್ರೆಸ್ ಸೇರುವ ಮಾತುಗಳೂ ಕೇಳಿಬರುತ್ತಿವೆ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಸುಮಲತಾ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕರೆದೊಯ್ಯುವ ಚಿಂತನೆ ಬಿಜೆಪಿಯಲ್ಲಿದೆ ಎನ್ನಲಾಗಿದೆ.
ಇತ್ತ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗೊಂದಲ ಮುಂದುವರಿದಿದೆ. ಬಿಜೆಪಿಯಲ್ಲೂ ಆಕಾಂಕ್ಷಿಗಳಿದ್ದಾರೆ. ಆದರೆ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವುಣದರಿಂದ ಜೆಡಿಎಸ್ ನಾಯಕರ ಹಿಡಿತಕ್ಕೆ ಕ್ಷೇತ್ರ ಸಿಗಲಿದ್ದು, ಇದರಿಂದ ಜೆಡಿಎಸ್ನಿಂದಲೇ ಮೈತ್ರಿ ಅಭ್ಯರ್ಥಿ ಯಾಗುವುದು ಖಚಿತವಾಗಿದೆ.
ಈಗಾಗಲೇ ಕುಮಾರಸ್ವಾಮಿ, ನಿಖೀಲ್ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹೆಸರು ಮುಂಚೂಣಿಯಲ್ಲಿದೆ. ಸದ್ಯದ ಮೂಲಗಳ ಪ್ರಕಾರ ಎಚ್.ಡಿ.
ಕುಮಾರಸ್ವಾಮಿ ಅಭ್ಯರ್ಥಿಯಾಗ ಬಹುದೆಂದು ಹೇಳಲಾಗುತ್ತಿದೆ. ತಮ್ಮ ಪುತ್ರನ ರಾಜಕೀಯ ಭವಿಷ್ಯ ಕ್ಕಾಗಿ ಚನ್ನಪಟ್ಟಣ ಬಿಟ್ಟು ಮಂಡ್ಯ ಲೋಕಸಭೆಗೆ ಬರಬಹುದೆಂಬ ಚರ್ಚೆಗಳೂ ನಡೆಯುತ್ತಿವೆ. ಇದರ ನಡುವೆ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ ಕೂಡ ಟಿಕೆಟ್ ರೇಸ್ನಲ್ಲಿದ್ದಾರೆ. ಆದರೆ ಪಕ್ಷದಲ್ಲಿ ನಾಯಕರ ಹೊಂದಾಣಿಕೆ ಕೊರತೆ ಇರುವುದರಿಂದ ಕುಮಾರ ಸ್ವಾಮಿ, ದೇವೇಗೌಡ ಅಥವಾ ನಿಖೀಲ್ ಬಂದರೆ ಒಗ್ಗಟ್ಟು ಪ್ರದರ್ಶನವಾಗಲಿದೆ ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.