ಉಳಿದ ಅನ್ನ ಸೇವನೆ ಆರೋಗ್ಯದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ನೀವು ತಿಳಿದರೆ ಇಂದಿನಿಂದಲೇ ಈ ಅನ್ನ ಸೇವನೇಯನ್ನೇ ಬಿಟ್ಟುಬಿಡುತ್ತೀರಿ. ಹೌದು ಉಳಿದ ಅನ್ನವನ್ನು ಮಾರನೆ ದಿನ ಬಳಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವಂತೆ.
ವೈದ್ಯರು ಹೇಳುವಂತೆ ಸರಿಯಾಗಿ ಸಂಗ್ರಹಿಸದ ಉಳಿದ ಅನ್ನವನ್ನು ತಿನ್ನುವುದು ವಾಂತಿ ಮತ್ತು ಭೇದಿಯಂತಹ ತೀವ್ರವಾದ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದಂತೆ.
ಇನ್ನೂ ಈ ಕಾಯಿಲೆಗಳಿಗೆ ಫ್ರೈಡ್ ರೈಸ್ ಸಿಂಡ್ರೋಮ್ ಎಂದು ಕರೆಯಲಾಗಿದೆ. ಇದು ಅನ್ನದ ವಿಷಕಾರಿ ಅಂಶಗಳು ದೇಹ ಸೇರಿಕೊಳ್ಳುವ ಪ್ರಕ್ರಿಯೆಯಾಗಿದೆ. ಹಾಗಾದರೆ ಈ ರೀತಿ ಆದಾಗ ನಮ್ಮ ದೇಹದಲ್ಲಿ ಏನಾಗುತ್ತದೆ. ಏನಿದು ಫ್ರೈಡ್ ರೈಸ್ ಸಿಡ್ರೋಮ್? ಏನಿದರ ಲಕ್ಷಣ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಇದು ಆಹಾರ ವಿಷವಾಗಿ ಮಾರ್ಪಡುವ ಒಂದು ರೀತಿಯ ಪ್ರಕ್ರಿಯೆಯಾಗಿದೆ. ಇದು ಬ್ಯಾಸಿಲಸ್ ಸೆರಿಯಸ್ (B. ಸೆರೆಯಸ್) ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಸೂಕ್ಷ್ಮಾಣು ಅಕ್ಕಿ ಮತ್ತು ಪಾಸ್ಟಾದಂತಹ ಪಿಷ್ಟ ಆಹಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಹೊರಗಿನಿಂದ ಬಂದು ಸೇರುವುದಿಲ್ಲ. ಬದಲಿಗೆ ಅದೇ ಆಹಾರದಲ್ಲಿ ಅತೀ ಕಡಿಮೆ ಸಮಯದಲ್ಲೇ ಜನ್ಮ ತಳೆಯುತ್ತದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಇದರ ಶಕ್ತಿ ಅಧಿಕವಾಗುತ್ತದೆ. ಹೀಗಾಗಿಯೇ ಬೇಸಿಗೆಯಲ್ಲಿ ಆಹಾರಗಳು ಬೇಗ ಕೆಡುತ್ತವೆ.
ನೀವು ಹಳೆಯ ಆಹಾರವನ್ನು ಬಿಸಿ ಮಾಡಿದಾಗಲೂ ಸಹ ಈ ಸೂಕ್ಷ್ಮಾಣು ಹುಟ್ಟಿಕೊಳ್ಳಲು ಆ ತಾಪಮಾನ ಸಾಕಷ್ಟು ಸಹಾಯ ಮಾಡಲಿದೆ. ಅಲ್ಲದೆ ಇವು ಬರಿಗಣ್ಣಿಗೆ ಕಾಣಿಸದಿರುವುದು ಹಾಗೂ ಆರಂಭದಲ್ಲಿ ಇವುಗಳಿಗೆ ವಾಸನೆಯೂ ಇಲ್ಲದಿರುವುದು ಆಹಾರದಲ್ಲಿ ಬೆರೆತಾಗ ಕಂಡುಹಿಡಿಯುವುದು ಕಷ್ಟದ ಕೆಲಸವಾಗುತ್ತದೆ.
ಫ್ರೈಡ್ ರೈಸ್ ಸಿಂಡ್ರೋಮ್ನ ಲಕ್ಷಣಗಳು ಹೊಟ್ಟೆಯಲ್ಲಿ ಅಸಹಜ ಸ್ಥಿತಿ ಉಂಟಾಗುತ್ತದೆ. ಅಂದರೆ ಜ್ವರ, ವಾಂತಿ, ಬೇಧಿ ಕಾಣಿಸಿಕೊಳ್ಳಲಿದೆ. ಸರಳವಾಗಿ ಹೇಳುವುದಾದರೆ ಇದೊಂದು ಫುಡ್ ಪಾಯಿಸನ್ ಸ್ಥಿತಿಯಾಗಿದೆ. ಕೆಲವರಲ್ಲಿ ಇದು ಉರಿಯೂತ, ಎದೆಯುರಿ, ಗುದದ್ವಾರದಲ್ಲಿ ಉರಿ ಕಾಣಿಸಿಕೊಳ್ಳಬಹುದು.