ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ಆಗಲಿದೆ. ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದು ಈಗಾಗಲೇ ಸೆಮಿ ಫೈನಲ್ಗೇರಿರುವ ಟೀಮ್ ಇಂಡಿಯಾಕ್ಕೆ ಇದೊಂದು ಔಪಚಾರಿಕ ಪಂದ್ಯ.
ಇಂದಿನ ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುತ್ತಾ ಎಂಬುದನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಇಂದು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಲಾಗಿದೆ. ಹವಾಮಾನ ವರದಿಯ ಪ್ರಕಾರ ಯಾವುದೇ ಮಳೆಯ ಸೂಚನೆ ಇಲ್ಲ. ಮೋಡ ಕವಿದ ವಾತಾವರಣ ಇರಬಹುದು.
ಇಂದು ಬೆಂಗಳೂರಿನಲ್ಲಿ ಶೇ. 71 ರಷ್ಟು ಮೋಡ ಕವಿದ ವಾತಾವರಣ ಇರಲಿದೆ. ಶೇ. 3 ರಷ್ಟು ಮಳೆಯ ಸಂಭವ ಇದೆಯಷ್ಟೆ. ಸಂಜೆಯ ವೇಳೆಗೆ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಬರಲಿದೆ. ಆರ್ದ್ರತೆಯು ಶೇ. 66 ರಷ್ಟು ಇರಬಹುದು ಎನ್ನಲಾಗಿದೆ. ಒಟ್ಟಾರೆ ಭಾರತ-ನೆದರ್ಲೆಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇಲ್ಲ.
ಟೂರ್ನಿಯಿಂದ ಹೊರಬಿದ್ದರೂ ಇಂದಿನ ಪಂದ್ಯ ನೆದರ್ಲೆಂಡ್ಸ್ ತಂಡಕ್ಕೆ ಮುಖ್ಯವಾಗಿದೆ. ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಸ್ಥಾನ ಪಡೆಯುವ ಡಚ್ಚರಿಗಿದೆ. ಮೂರನೇ ಜಯ ಸಾಧಿಸುವ ಮೂಲಕ ಮತ್ತು ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 8 ರೊಳಗೆ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ, ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಪ್ರವೇಶ ಪಡೆಯಬಹುದು.
ಭಾರತಕ್ಕೆ ನೆದರ್ಲೆಂಡ್ಸ್ ವಿರುದ್ಧದ ಇಂದಿನ ಪಂದ್ಯ ಲೆಕ್ಕಕ್ಕಿಲ್ಲದ ಕಾರಣ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರಿತ್ ಬುಮ್ರಾ ಹೊರಗುಳಿಯಬಹುದು. ಕೆಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ರೋಹಿತ್ ಜಾಗಕ್ಕೆ ಇಶಾನ್ ಕಿಶನ್ ಬರಬಹುದು.