ಇದೀಗ ಮುಲ್ತಾನ್ ಟೆಸ್ಟ್ ನಲ್ಲಿ ಅಬ್ಬರಿಸುತ್ತಿರುವ ಜೋ ರೂಟ್ ಬಗ್ಗೆನೇ ಚರ್ಚೆ. ಈ ಪುಣ್ಯಾತ್ಮ ಇದೇ ರೀತಿ ಆಡ್ತಿದ್ರೆ ಇನ್ನು ಎರಡು ಮೂರು ವರ್ಷಗಳಲ್ಲೇ ಸಚಿನ್ ತೆಂಡೂಲ್ಕರ್ ಟೆಸ್ಟ್ ದಾಖಲೆಗಳೆಲ್ಲ ಪುಡಿಪುಡಿಯಾಗುವುದು ಗ್ಯಾರಂಟಿ ಎಂಬ ಮಾತು ಕೇಳಿ ಬರ್ತಿದೆ. ಪಾಕಿಸ್ತಾನದ ವಿರುದ್ಧ ಮುಲ್ತಾನ್ ನಲ್ಲಿ ನಡೆದ ಟೆಸ್ಟ್ ನಲ್ಲಿ ಆತನ ಆಟ ನೋಡಿದವರು ಇನ್ನೂ ಈತನ ಬಳಿ ದಶಕದ ಆಟ ಇದೆ ಎಂದೇ ಹೇಳುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಇಂಗ್ಲಿಷರು ಅಲೆಸ್ಟರ್ ಕುಕ್ ಬಗ್ಗೆಯೂ ಇರಿಸಿಕೊಂಡಿದ್ದರು. ಆದರೆ ಅದೇಕೋ ಏನೋ, ಆತನಿಗೆ ಕ್ರಿಕೆಟ್ ಸಾಕು ಅನ್ನಿಸಿದಾಗಲೇ ವಿದಾಯ ಹೇಳಿಬಿಟ್ಟ. ಅಲ್ಲಿಗೆ ಸಚಿನ್ ಟೆಸ್ಟ್ ದಾಖಲೆಗಳು ಅಬಾಧಿತ ಎಂದೇ ಬಗೆಯಲಾಯಿತು. ಆದರೆ ಕುಕ್ ನೇಪಥ್ಯಕ್ಕೆ ಸರಿದ ಬಳಿಕ ಇದೀಗ ಆರ್ಭಟಿಸುತ್ತಿರುವ ಜೋ ರೂಟ್ ಇನ್ನು ಬೇಕಿರುವುದು ಕೇವಲ 3,257 ರನ್ ಗಳಷ್ಟೇ!
ಸಚಿನ್ 200 ಪಂದ್ಯಗಳಿಂದ 15921 ರನ್ ಕಲೆ ಹಾಕಿದ್ದರೆ, 33ರ ಹರೆಯದ ಜೋ ರೂಟ್ ಆ ಹಾದಿಯಲ್ಲಿ ಈಗಾಗಲೇ ಬಹಳ ದೂರ ಕ್ರಮಿಸಿದ್ದು 147 ಪಂದ್ಯಗಳಿಂದ 12664 ರನ್ ಗಳಿಸಿದ್ದಾನೆ. ಇನ್ನು ಶತಕಗಳ ವಿಚಾರಕ್ಕೆ ಬಂದಾಗಲೂ ಅಷ್ಟೇ. ಸಚಿನ್ ನದ್ದು ದಾಖಲೆಯ 51 ಶತಕಗಳಾದರೆ, ಜೋ ರೂಟ್ ಈವರೆಗೆ 35 ಶತಕಗಳನ್ನು ಬಾರಿಸಿದ್ದಾನೆ.
ಇದೇ ಫಾರ್ಮ ಅನ್ನು ಉಳಿಸಿಕೊಂಡು ಇನ್ನು ಮೂರ್ನಾಲ್ಕು ವರ್ಷಗಳ ಕಾಲ ಆತ ಆಡಿದರೂ ನಿರಾಯಾಸವಾಗಿ ಈ ಸಾಧನೆಯ ಶಿಖರ ವನ್ನು ಏರಬಲ್ಲ ಎಂಬುದು ಕ್ರಿಕಟ್ ಪಂಡಿತರ ಲೆಕ್ಕಾಚಾರ. ಇನ್ನು ಎಲ್ಲದರಲ್ಲೂ ಮೂಗು ತೂರಿಸುವ ಮೈಕಲ್ ವಾನ್ ಅಂತೂ ಜೋ ರೂಟ್ ವಿಚಾರದಲ್ಲಿ ಕೆಲವೊಂದು ವಿಚಾರಗಳನ್ನು ಹೇಳದೇ ಇದ್ದರೆ ಆದೀತಾ? ಗುರುವಾರವಷ್ಟೇ ಬೂಮ್ರಾ ಬೌಲಿಂಗ್ ಗೆ ರೂಟ್ ತಿಣುಕಾಡುತ್ತಾನೆ ಎಂದಿದ್ದ ವಾನ್ ಇದೀಗ ಮತ್ತೊಂದು ಟಿಪ್ಪಣಿ ನೀಡಿದ್ದಾರೆ.