ಪಾಕಿಸ್ತಾನ ತಂಡದ ವಿರುದ್ಧ ಮುಲ್ತಾನ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಅಜೇಯ ದ್ವಿಶತಕದೊಂದಿಗೆ ಆಟವಾಡುತ್ತಿರುವ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸ್ತುತ ಆಟವಾಡುತ್ತಿರುವ ಕ್ರಿಕೆಟಿಗರಲ್ಲಿ 20 ಸಾವಿರ ರನ್ ಗಳನ್ನು ಗಳಿಸಿದ ಎರಡನೇ ಆಟಗಾರೆಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರಿಗಿಂತ ಹೆಚ್ಚು ರನ್ ಹೊಡೆದಿರುವ ಏಕೈಕ ಬ್ಯಾಟರ್ ಅಂದ್ರೆ ಅದು ನಮ್ಮ ವಿರಾಟ್ ಕೊಹ್ಲಿ ಮಾತ್ರ. ಅವರು ಒಟ್ಟು 535 ಪಂದ್ಯಗಳಿಂದ 27,041 ರನ್ ಗಳನ್ನು ಬಾರಿಸಿದ್ದರೆ, ಜೋ ರೂಟ್ 350 ಪಂದ್ಯಗಳಿಂದ 20 ಸಾವಿರ ರನ್ ದಾಟಿ ಮುನ್ನಡೆಯುತ್ತಿದ್ದಾರೆ.
ಕ್ರಿಕೆಟ್ ನಲ್ಲಿ ಒಟ್ಟಾರೆ ಅತ್ಯಧಿಕ ರನ್ ಗಳ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಇದೆ. ಸಚಿನ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಒಟ್ಟಾರೆ 664 ಪಂದ್ಯಗಳಿಂಜ 34357 ರನ್ ಗಳಿಸಿದ್ದಾರೆ. ಆ ಬಳಿಕ ಕುಮಾರ್ ಸಂಗಕ್ಕಾರ (28016), ರಿಕಿ ಪಾಂಟಿಂಗ್ (27483), ವಿರಾಟ್ ಕೊಹ್ಲಿ (27,041) ರನ್ ಗಳನ್ನು ಗಳಿಸಿದ್ದಾರೆ. ಆ ಬಳಿಕ ಜಯವರ್ಧನೆ (25957), ಜಾಕ್ ಕಾಲಿಸ್ (25,534), ರಾಹುಲ್ ದ್ರಾವಿಡ್ (24,208) ಬ್ರಿಯಾನ್ ಲಾರಾ(22,358), ಜಯಸೂರ್ಯ (21032), ಚಂದ್ರಪಾಲ್(20,988) ಇನ್ಝಮಾಮುಲ್ ಹಕ್ (20,580), ಎಬಿ ಡಿವಿಲ್ಲಿಯರ್ಸ್ (20014) ಇದ್ದಾರೆ.
ಆದರೆ ಜೋ ರೂಟ್ ಆಡುತ್ತಿರುವ ಪರಿ ನೋಡಿದರೆ ಕ್ರಿಕೆಟ್ ದಿಗ್ಗಜ ಸಚಿನ್ ಹೆಸರಲ್ಲಿರುವ ಎರಡು ಮಹತ್ವದ ದಾಖಲೆಗಳನ್ನಂತೂ ಮುರಿಯುವ ಎಲ್ಲಾ ಲಕ್ಷಣಗಳನ್ನೂ ತೋರುತ್ತಿದ್ದಾರೆ. ಸಚಿನ್ 220 ಪಂದ್ಯಗಳಿಂದ 15921 ರನ್ ಗಳನ್ನು ಹೊಡೆದಿದ್ದಾರೆ ಅದರಲ್ಲಿ 51 ಶತಕಗಳಿವೆ. ಅದೇ ಜೋ ರೂಟ್ ಅವರು 147 ಪಂದ್ಯಗಳಿಂದ 12660 ರನ್ ಗಳನ್ನು ಪೇರಿಸಿದ್ದಾರೆ. ಅದರಲ್ಲಿ 35 ಶತಕಗಳು ಅಡಕವಾಗಿವೆ.