ಬುಧವಾರ ನಡೆಯುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೋಹಿತ್ ಶರ್ಮಾ ಅವರಿಗೆ ಅಗ್ನಿಪರೀಕ್ಷೆಯಾಗಿದೆ.
ರೋಹಿತ್ ನಾಯಕತ್ವದ ಬಳಗವು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಡಲಿದೆ. 2019ರ ಸೆಮಿಫೈನಲ್ನಲ್ಲಿ ಕಿವೀಸ್ ಬಳಗದ ಎದುರು ಸೋತಿದ್ದ ಭಾರತ ತಂಡವು ಪ್ರಶಸ್ತಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು.
ಆಗ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು.
ಈಗ ಆ ಸೋಲಿನ ಮುಯ್ಯಿ ತೀರಿಸಿಕೊಳ್ಳುವುದರ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್ಗೆ ಲಗ್ಗೆ ಇಡುವ ಛಲ ಭಾರತ ತಂಡದಲ್ಲಿದೆ. ತಮ್ಮ ತವರೂರಿನ ಅಂಗಳದಲ್ಲಿ ಗೆಲುವಿನ ಸಂಭ್ರಮ ಆಚರಿಸುವ ಆತ್ಮವಿಶ್ವಾಸ 36 ವರ್ಷದ ಶರ್ಮಾಗೂ ಇದೆ.
ಟೂರ್ನಿಯ ಲೀಗ್ ಸುತ್ತಿನಲ್ಲಿ ಎಲ್ಲ ಒಂಬತ್ತು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಆತಿಥೇಯರು ಲಗ್ಗೆ ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಗುರಿ ಬೆನ್ನಟ್ಟಿದ್ದ ಸಂದರ್ಭದಲ್ಲಿ 2 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ಪಂದ್ಯದಲ್ಲಿ ವಿರಾಟ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಜೊತೆಯಾಟದಿಂದಾಗಿ ತಂಡ ಗೆದ್ದಿತ್ತು.
ಅದರ ನಂತರದ ಎಲ್ಲ ಪಂದ್ಯಗಳಲ್ಲಿಯೂ ಅಧಿಕಾರಯುತ ಜಯ ಸಾಧಿಸಿದ ತಂಡವು ಎಲ್ಲ ವಿಭಾಗಗಳಲ್ಲಿಯೂ ಪರಿಪೂರ್ಣವಾಗಿದೆ. ಧರ್ಮಶಾಲಾದಲ್ಲಿ ಇದೇ ನ್ಯೂಜಿಲೆಂಡ್ ತಂಡವನ್ನೂ ಭಾರತವು ಮಣಿಸಿತ್ತು.
ರೋಹಿತ್ ಮತ್ತು ಗಿಲ್ ಅಮೋಘ ಆರಂಭ ನೀಡುತ್ತಿದ್ದಾರೆ. ವಿರಾಟ್, ಶ್ರೇಯಸ್ ಮತ್ತು ಕೆ. ಎಲ್ . ರಾಹುಲ್ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.