ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸದ್ಯದಲ್ಲೇ ಮದುವೆ ಆಗಲಿದ್ದಾರೆ. ತನಗಿಂತ ಕಿರಿಯ ನಟ ಝಹೀರ್ ಇಖ್ಬಾಲ್ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರದ್ದು ಅಂತರ್ ಧರ್ಮೀಯ ವಿವಾಹ ಆಗಲಿರುವುದರಿಂದ ಕುಟುಂಬದವರಿಗೆ ಪೂರ್ಣ ಸಮ್ಮತಿ ಇಲ್ಲ ಎಂದು ಕೆಲವರು ಗಾಸಿಪ್ ಹಬ್ಬಿಸಿದ್ದರು. ಅಲ್ಲದೇ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾಗೆ ಈ ಮದುವೆಗೆ ಹೋಗಲು ಮನಸ್ಸಿಲ್ಲ ಎಂದು ಸುದ್ದಿ ಹರಡಿತ್ತು. ಆದರೆ ಇದೀಗ ಮಗಳ ಮದುವೆಯ ಬಗ್ಗೆ ಶತ್ರುಘ್ನ ಸಿನ್ಹಾ ಖುಷಿ ಖುಷಿಯಾಗಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಗಳ ಮದುವೆ ಕುರಿತು ಮಾತನಾಡಿದ ಶತ್ರುಘ್ನ ಸಿನ್ಹಾ, ‘ನಾನು ಖಂಡಿತವಾಗಿ ಮದುವೆಗೆ ಹೋಗುತ್ತೇನೆ. ಯಾಕೆ ಹೋಗಬಾರದು? ಸೋನಾಕ್ಷಿ ಮತ್ತು ಝಹೀರ್ ಒಟ್ಟಿಗೆ ಬಾಳಬೇಕು. ಅವರಿಬ್ಬರ ಜೋಡಿ ತುಂಬ ಚೆನ್ನಾಗಿದೆ’ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
‘ಸುಳ್ಳು ಸುದ್ದಿ ಹಬ್ಬಿಸುವವರು ಈ ಮದುವೆ ಬಗ್ಗೆ ಹತಾಶರಾಗಿದ್ದಾರೆ ಅಷ್ಟೇ. ಅದಕ್ಕಾಗಿ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಮದುವೆ ಅವರಿಗೆ ಸಂಬಂಧಿಸಿದ್ದಲ್ಲ. ಅಂಥವರೆಲ್ಲ ತಮ್ಮ ತಮ್ಮ ಕೆಲಸ ನೋಡಿಕೊಂಡರೆ ಸಾಕು’ ಎಂದು ಶತ್ರುಘ್ನ ಸಿನ್ಹಾ ಖಡಕ್ ಆಗಿ ಹೇಳಿದ್ದಾರೆ. ಬಾಲಿವುಡ್ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರು ಖ್ಯಾತಿ ಗಳಿಸಿದ್ದಾರೆ. ಅವರು ನಟಿಸಿದ ‘ಹೀರಾಮಂಡಿ’ ವೆಬ್ ಸರಣಿ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ.
ಜೂನ್ 23ರಂದು ಸೋನಾಕ್ಷಿ ಸಿನ್ಹಾ, ಝಹೀರ್ ಇಖ್ಬಾಲ್ ಮದುವೆ ನಡೆಯಲಿದೆ ಎಂಬ ಮಾಹಿತಿ ಇದೆ. ಅದೇ ದಿನ ಸಂಜೆ ಬಾಲಿವುಡ್ ಮಂದಿಗೆ ಅದ್ದೂರಿ ಔತಣಕೂಟ ಏರ್ಪಡಿಸಲಾಗಿದ್ದು ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ಮದುವೆಗೆ ಆಮಂತ್ರಣ ನೀಡಲಾಗಿದೆಯಂತೆ.