ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಫೆಬ್ರವರಿ 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ನಡೆದ ಮದುವೆ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಜನ ಸಾಮಾನ್ಯರು ಸೇರಿದಂತೆ ಸುಮಾರು 75 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದಸ್ದಾರೆ. ಇದೀಗ ಮದುವೆಯಾದ ಬಳಿಕ ಧನಂಜಯ್ ಹಾಗೂ ಧನ್ಯತಾ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.
ಮದುವೆ ಮುಗಿದ ಮೇಲೆ ಧನಂಜಯ್ ತಮ್ಮ ಪತ್ನಿ ಧನ್ಯತಾರನ್ನು ಕರೆದುಕೊಂಡು ಅಭಿಮಾನಿಗಳಿಗೆ ಎಂದು ಮಾಡಿರುವ ವಿದ್ಯಾಪತಿ ದ್ವಾರದಲ್ಲಿ ವಂದನೆ ತಿಳಿಸಿದ್ದರು. ಮಂಡಿಯೂರಿ ಧನ್ಯವಾದಗಳನ್ನು ಹೇಳಿದ್ದಾರೆ. ಇದೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ,
ಮದುವೆಗೆ ಬಂದು ಹರಸಿದ, ಬರಲಾಗದೆ ಇದ್ದರು ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಹೃದಯಪೂರ್ವಕ ನಮನಗಳು.
ಯಾವುದೇ ತೊಂದರೆ ಆಗದೆ ಸಮಾರಂಭ ಚೆನ್ನಾಗಿ ಆಗುವಲ್ಲಿ ಕುಟುಂಬದ ಜೊತೆ ಸ್ನೇಹಿತರು, ನೆಂಟರು, ಇಷ್ಟರು, ಮಾಧ್ಯಮ, ಪೊಲೀಸ್ ಇಲಾಖೆ, ಕಾರ್ಮಿಕರು, ಅಭಿಮಾನಿಗಳಾದಿಯಾಗಿ ಸಾಕಷ್ಟು ಜನರ ಶ್ರಮವಿದೆ. ಎಲ್ಲರಿಗೂ ತುಂಬು ಅಭಿಮಾನದ ಕೃತಜ್ಞತೆಗಳು.
ತುಂಬ ಜನ ಸೇರಿದ್ದರಿಂದ, ಕೆಲವರಿಗೆ ನಮ್ಮನ್ನು ತಲುಪಲು ತೊಂದರೆಯುಂಟಾಗಿದ್ದಲ್ಲಿ, ತಲುಪಲು ಸಾಧ್ಯವಾಗಿರದಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ, ಖಂಡಿತವಾಗಿಯೂ ಇನ್ನಷ್ಟು ಒಳ್ಳೆ ವಿಷಯಗಳೊಂದಿಗೆ ಮತ್ತೆ ಸಿಗುತ್ತೇವೆ. ಆಶೀರ್ವಾದವಿರಲಿ.
ಇಷ್ಟೆಲ್ಲದರ ಮಧ್ಯೆ ಬಂದು ಹರಸಿದ ನನ್ನ ಚಿತ್ರರಂಗದ ಗೆಳೆಯರು , ತಾರೆಯರು, ಕಾರ್ಮಿಕರು, ಹಾಗೂ ನಮಗಾಗಿ ಕೆಲಸಕ್ಕೆ ನಿಂತ ಪ್ರೊಡಕ್ಷನ್ ಮ್ಯಾನೇಜರ್ಸ್ ತಂಡಕ್ಕೆ, ಒಟ್ಟಾಗಿ ನನ್ನ ಚಿತ್ರರಂಗದ ಕುಟುಂಬಕ್ಕೆ ಹೃಯಪೂರ್ವಕ ನಮನಗಳು.
ಮದುವೆಯ ಮೆರಗು ಹೆಚ್ಚಿಸಿದ ಪ್ರೀತಿಯ ಅಭಿಮಾನಿಗಳಿಗೆ special thanks.
ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕ ನಮನಗಳು. ಎಂದು ಧನಂಜಯ್ ಬರೆದುಕೊಂಡಿದ್ದಾರೆ.