ಕ್ಯಾಲಿಫೋರ್ನಿಯಾ : ಲಾಸ್ ಏಂಜಲೀಸ್ ನಲ್ಲಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಇದುವರೆಗೂ ಕನಿಷ್ಠ ಕನಿಷ್ಠ 24 ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ. ಭೀಕರ ಕಾಡ್ಗಿಚ್ಚಿಗೆ ಹಲವು ಕಟ್ಟಡಗಳು ಭಸ್ಮಗೊಂಡಿದ್ದು, ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಹೇಳಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ನೈಸರ್ಗಿಕ ವಿಕೋಪವಾಗಿದೆ ಎಂದು ನ್ಯೂಸಮ್ ನೋವು ತೋಡಿಕೊಂಡಿದ್ದಾರೆ.
ಲಾಸ್ ಏಂಜಲೀಸ್ ನಲ್ಲಿ ಸತತ ಆರನೇ ದಿನವೂ ಕಾಡ್ಗಿಚ್ಚು ಮುಂದುವರಿದಿದ್ದು, ಎರಡು ಕಾಡ್ಗಿಚ್ಚುಗಳಲ್ಲಿ ಮೃತರ ಸಂಖ್ಯೆ 24ಕ್ಕೆ ಏರಿದೆ. ಇವುಗಳಲ್ಲಿ ಪಾಲಿಸೇಡ್ಸ್ ನಲ್ಲಿ ಎಂಟು ಮೃತದೇಹಗಳು ಮತ್ತು ಈಟನ್ ವಲಯದಲ್ಲಿ 16 ಮೃತದೇಹಗಳು ಪತ್ತೆಯಾಗಿದೆ.
ಬೆಂಕಿಗಾಹುತಿಯಾದ ಎಲ್ಲಾ ಪ್ರದೇಶಗಳಿಗೆ ತುರ್ತು ಸೇವೆಗಳು ತಕ್ಷಣಕ್ಕೆ ಸಾಧ್ಯವಿಲ್ಲದ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಟನ್ ವಲಯದಲ್ಲಿ 12 ಮಂದಿ ಮತ್ತು ಪಾಲಿಸೇಡ್ಸ್ ವಲಯದಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಡ್ಗಿಚ್ಚಿಗೆ 12,000ಕ್ಕೂ ಅಧಿಕ ಕಟ್ಟಡಗಳು ಬೆಂಕಿಗಾಹುತಿಯಾಗಿದೆ. 1 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಜನವರಿ 7ರಂದು ಬೆಂಕಿ ಪ್ರಾರಂಭವಾದಾಗಿನಿಂದ ಸುಮಾರು 39,000 ಎಕರೆಗಳಷ್ಟು ಭೂಮಿ ಸುಟ್ಟು ಹೋಗಿದೆ. ಭೀಕರ ಕಾಡ್ಗಿಚ್ಚಿಗೆ 135 ಶತಕೋಟಿ ಡಾಲರ್ ನಿಂದ 150 ಶತಕೋಟಿ ಡಾಲರ್ ನಷ್ಟು ಆರ್ಥಿಕ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.