ಹುಬ್ಬಳ್ಳಿ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಪತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಳೇಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ. ಸಾಹಿಕ್ತಾ ಬೇಪಾರಿ (25) ಕೊಲೆಯಾದ ಮಹಿಳೆ, ಪತಿ ಮಲ್ಲಿಕ್ ಬೇಪಾರಿ(28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ‘ಹಳೇಹುಬ್ಬಳ್ಳಿ ನಿವಾಸಿಯಾಗಿದ್ದ ಸಾಹಿಕ್ತಾ ಅವರನ್ನು ಐದಾರು ವರ್ಷಗಳ ಹಿಂದೆ ಬೈಲಹೊಂಗಲ ವ್ಯಕ್ತಿಯೊಬ್ಬರ ಜೊತೆ ಮದುವೆ ಮಾಡಿಕೊಡಲಾಗಿತ್ತು. ಕೆಲ ತಿಂಗಳ ಹಿಂದೆ ಪತಿ ಮೃತಪಟ್ಟಿದ್ದರು.
ಇಬ್ಬರು ಮಕ್ಕಳ ಜೊತೆ ಅವರು ತವರಿಗೆ ಬಂದು ವಾಸಿಸುತ್ತಿದ್ದರು. ಕುಟುಂಬದವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಲ್ಲಿಕ್ ಬೇಪಾರಿ ಜೊತೆ ಎರಡನೇ ಮದುವೆ ಮಾಡಿಸಿದ್ದರು. ಪತಿ ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಬೆಳಿಗ್ಗೆ ಅದೇ ವಿಷಯಕ್ಕೆ ಮತ್ತೆ ಜಗಳವಾಗಿದ್ದು, ಮಲ್ಲಿಕ್ ಕೋಪದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಅವರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.ಕಸಬಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.