ಸೆಪ್ಟಂಬರ್ 19 ರಂದು ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ 16 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ಅಂದ ಹಾಗೆ 20 ತಿಂಗಳುಗಳ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆದರೆ, ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಹಾಗೂ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಮೊದಲನೇ ಪಂದ್ಯದಿಂದ ಕೈ ಬಿಡಲಾಗಿದೆ.
ಎರಡನೇ ಮಗುವಿನ ಜನನದ ಕಾರಣ ಇಂಗ್ಲೆಂಡ್ ವಿರುದ್ಧ ಕಳೆದ ಟೆಸ್ಟ್ ಸರಣಿಗೆ ವಿರಾಮ ಪಡೆದಿದ್ದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಮತ್ತೆ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಜಸ್ಪ್ರೀತ್ ಬುಮ್ರಾ ಟೆಸ್ಟ್ ತಂಡಕ್ಕೆ ಬಂದಿದ್ದಾರೆ.
ಟೀಮ್ ಇಂಡಿಯಾ ಸೆಲೆಕ್ಟರ್ಸ್ ಟೆಸ್ಟ್ ಸರಣಿಗಳಿಗೆ ಬಲಿಷ್ಠ ತಂಡ ರಚನೆ: ಸಂಭಾವ್ಯ ತಂಡ ಹೀಗಿದೆ
2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು ತಮ್ಮ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಹೆಚ್ಚೂ-ಕಡಿಮೆ ಒಂದು ವರ್ಷದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶಮಿ ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಸಂಪೂರ್ಣವಾಗಿ ಇನ್ನೂ ಗುಣಮುಖರಾಗಿಲ್ಲ. ಈ ಕಾರಣದಿಂದ ಅವರನ್ನು ತ್ವರಿತವಾಗಿ ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಆಯ್ಕೆ ಮಾಡಿ ಹೆಚ್ಚಿನ ಅಪಾಯವನ್ನು ಎಳೆದುಕೊಳ್ಳಲು ಬಿಸಿಸಿಐಗೆ ಇಷ್ಟವಿಲ್ಲ.
ಅಂದ ಹಾಗೆ ಮೊಹಮ್ಮದ್ ಶಮಿ ಅವರು ದೇಶಿ ರೆಡ್ ಬಾಲ್ ಪಂದ್ಯದಲ್ಲಿ ಆಡಿ ತಾವು ಸಂಪೂರ್ಣ ಫಿಟ್ ಇರುವುದಾಗಿ ಸಾಬೀತುಪಡಿಸಿದ ಬಳಿಕವೇ ಅವರನ್ನು ಭಾರತ ತಂಡದ ಆಯ್ಕೆ ಪರಿಗಣಿಸಲಾಗುತ್ತದೆ. ಅಕ್ಟೋಬರ್ ಒಂದರಿಂದ ರಣಜಿ ಟ್ರೋಫಿ ಆರಂಭವಾಗಲಿದೆ. ವರದಿಗಳ ಪ್ರಕಾರ ಮೊಹಮ್ಮದ್ ಶಮಿ ಅವರು ಬಂಗಾಳ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ. ಇಲ್ಲಿ ಶಮಿ ಅವರ ಸಾಮರ್ಥ್ಯವನ್ನು ಬಿಸಿಸಿಐ ಆಯ್ಕೆದಾರರು ಗಮನಿಸಿ, ಸಂಪೂರ್ಣ ಫಿಟ್ ಇರುವ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಅವರನ್ನು ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಆಯ್ಕೆ ಮಾಡಬಹುದು