ಜನವರಿ 16ರ ಗುರುವಾರ ಮುಂಜಾನೆ 2.30ರ ಸುಮಾರಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ವ್ಯಕ್ತಿಯೋರ್ವ ಸೈಫ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ನಡೆದ ಒಂದೆರಡು ದಿನದಲ್ಲೇ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ಅಂದಿನ ಘಟನೆಯ ಬಗ್ಗೆ ಆರೋಪಿಯು ಹಲವು ಅಂಶಗಳನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಯು ಬಾಂಗ್ಲಾದೇಶಿಯ ಪ್ರಜೆ ಎಂದು ಗುರುತಿಸಲಾಗಿದ್ದು ಆರು ತಿಂಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದನಂತೆ. ಇಲ್ಲಿ ವಿಜಯ್ ದಾಸ್ ಎಂದು ಹೆಸರು ಬದಲಿಸಿಕೊಂಡು ಬಾರ್ ಒಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ದಾಳಿಕೋರ, ಸೈಫ್ ಅಲಿ ಖಾನ್ ಮನೆಗೆ ನುಗ್ಗಿದಾಗ ಅದು ಬಾಲಿವುಡ್ನ ಸ್ಟಾರ್ ನಟನೊಬ್ಬನ ಮನೆ ಎಂಬುದು ಆತನಿಗೆ ತಿಳಿದಿರಲಿಲ್ಲ. ಯಾವುದೋ ಶ್ರೀಮಂತರ ಮನೆ ಎಂದುಕೊಂಡು ಆತ ನುಗ್ಗಿದ್ದ ಎಂದು ಆರೋಪಿಯು ಹೇಳಿದ್ದಾನೆ.
ಅಪಾರ್ಟ್ಮೆಂಟ್ ಫ್ಲ್ಯಾಟ್ನ 8 ಮಹಡಿ ಸರ್ವೀಸ್ ಮೆಟ್ಟಿಲು ಬಳಸಿ ಹತ್ತಿದ್ದ ದಾಳಿಕೋರ ಆ ನಂತರ ಏಸಿ ಡಕ್ ಮೂಲಕ 12ನೇ ಮಹಡಿಗೆ ಏರಿ, ಬಾತ್ರೂಂ ಕಿಟಕಿಯಿಂದ ಸೈಫ್ ಅಲಿ ಖಾನ್ರ ಫ್ಲ್ಯಾಟ್ ಸೇರಿಕೊಂಡಿದ್ದ. ಅಲ್ಲಿ ಸೈಫ್ರ ಸಹಾಯಕರು ಆತನನ್ನು ನೋಡಿದ ಕಾರಣ ಆತ ತಪ್ಪಿಸಿಕೊಳ್ಳುವ ಭರದಲ್ಲಿ ಸೈಫ್ ಅಲಿ ಖಾನ್ ಕಿರಿಯ ಪುತ್ರ ಜೇಹ್ನ ಕೋಣೆ ಸೇರಿಕೊಂಡ, ಆಗ ಸೈಫ್ ಅಲಿ ಖಾನ್ ಮಗನಿಗೆ ಏನಾದರೂ ಮಾಡಿಬಿಡುತ್ತಾನೇನೋ ಎನ್ನುವ ಆತಂಕದಲ್ಲಿ ಕೋಣೆಗೆ ನುಗ್ಗಿದ ಸೈಫ್ ಅಲಿ ಖಾನ್ ದಾಳಿಕೋರನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಹಿಡಿತದಿಂದ ತಪ್ಪಿಸಿಕೊಳ್ಳಲು ದಾಳಿಕೋರ ಚಾಕುವಿನಿಂದ ಇರಿದಿದ್ದಾನೆ. ಸೈಫ್ ಅಲಿ ಖಾನ್, ಮುಂದಿನಿಂದ ಹಿಡಿದಿದ್ದ ಕಾರಣ, ದಾಳಿಕೋರ ಸೈಫ್ ಅಲಿ ಖಾನ್ನ ಬೆನ್ನಿಗೆ ಚಾಕು ಇರಿದಿದ್ದಾಗಿ ಹೇಳಿಕೊಂಡಿದ್ದಾನೆ.
ದಾಳಿಕೋರ ಬಾಂಗ್ಲಾದಿಂದ ಭಾರತಕ್ಕೆ ಬಂದಾಗ ಮೊದಲಿಗೆ ಮುಂಬೈನ ಸ್ಲಿಂಕ್ ಆಂಡ್ ಬರ್ದೋತ್ ಹೆಸರಿನ ಐಶಾರಾಮಿ ಹೋಟೆಲ್ನಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ. ಆದರೆ ಹೋಟೆಲ್ ಬಂದ ಅತಿಥಿಯೊಬ್ಬರ ಹಣ ಕದ್ದಿದ್ದ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾಗಿ ಆ ಹೋಟೆಲ್ನ ಜನರಲ್ ಮ್ಯಾನೇಜರ್ ಹೇಳಿದ್ದಾರೆ. ಆ ಬಳಿಕ ಆತ ಲೇಬರ್ ಕಂಪೆನಿಯೊಂದರ ಮೂಲಕ ಥಾಣೆಯ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.