ಬೆಂಗಳೂರು: ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರತನ್ ಟಾಟಾ ಕೇವಲ ಉದ್ಯಮಿಯಷ್ಟೇ ಅಲ್ಲ, ತತ್ವಜ್ಞಾನಿಯೂ ಹೌದು. ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದಾಗ ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿದ ಮಹಾನ್ ವ್ಯಕ್ತಿ. ಭಾರತದ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಕೈಲಾದ ನೆರವು ನೀಡಿದ್ದಾರೆ. ರತನ್ ಟಾಟಾ 2000ನೇ ಇಸ್ವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಸಹಾನುಭೂತಿಯುಳ್ಳ ಆತ್ಮ ಮತ್ತು ಅಸಾಧಾರಣ ಮನುಷ್ಯ: ರತನ್ ಟಾಟಾ ನಿಧನಕ್ಕೆ ಪ್ರಧಾನಿ ಸಂತಾಪ
1937ರ ಡಿಸೆಂಬರ್ 28ರಂದು ಹುಟ್ಟಿದ ರತನ್ ಟಾಟಾ ಈ ದೇಶದ ಅತ್ಯಂತ ಯಶಸ್ವಿ ಉದ್ಯಮಿಯಾಗಿ ಬೆಳೆದರು. ವ್ಯಾಪಾರ ನೀತಿಯಲ್ಲಿ ಹೆಸರು ಮಾಡಿದಂತೆ, ತಮ್ಮ ಪರೋಪಕಾರ ನಡೆಯಿಂದಲೂ ಸಿಕ್ಕಾಪಟೆ ಖ್ಯಾತಿ ಗಳಿಸಿದ್ದಾರೆ. ಮುಂಬೈನಲ್ಲಿ ಜನಿಸಿದ ಇವರ ತಂದೆ ಹೆಸರು ನೇವಲ್ ಟಾಟಾ, ತಾಯಿ ಸೂನಿ ಟಾಟಾ. ಇವರ ಕುಟುಂಬ ಮೂಲತಃ ಗುಜರಾತ್ನ ಸೂರತ್ನಲ್ಲಿದೆ. ಇದರಲ್ಲಿ ಅತ್ಯಂತ ಮುಖ್ಯ ವಿಷಯವೆಂದರೆ, ಟಾಟಾ ಗ್ರೂಪ್ನ ಸಂಸ್ಥಾಪಕರಾದ ಜೆಮ್ ಸೆಟ್ ಜಿ ಟಾಟಾ (ಜೆಆರ್ಡಿ ಟಾಟಾ) ಅವರ ದತ್ತುಪುತ್ರ ಈ ನೇವಲ್ ಟಾಟಾ. ಅಂದರೆ ರತನ್ ಟಾಟಾ ಅವರು ಜೆಆರ್ಡಿ ಟಾಟಾರ ದತ್ತುಪುತ್ರನ ಮಗ.
1948ರಲ್ಲಿ ಅವರ ತಂದೆ ನೇವಲ್ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾಗುತ್ತಾರೆ. ಆಗಿನಿಂದಲೂ ರತನ್ ಟಾಟಾ ಅವರು ಅಜ್ಜಿಯ ಆಶ್ರಯ ಪಡೆದುಕೊಂಡರು. 1961ರಲ್ಲಿ ಟಾಟಾ ಸ್ಟೀಲ್ನಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡರು. ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ರತನ್ ಟಾಟಾ ಮದುವೆಯಾಗಿಲ್ಲ. ಆದರೆ ನಾಲ್ಕು ಬಾರಿ ಪ್ರೀತಿ ವಿಫಲವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದ ರತನ್ ಟಾಟಾ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ. ಆದರೆ ಕಷ್ಟಕರ ಸಂದರ್ಭಗಳು ಹಾಗೂ ಅನಿವಾರ್ಯ ಸನ್ನಿವೇಶಗಳಿಂದಾಗಿ ಪ್ರೀತಿ-ಪ್ರೇಮ ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಹೇಳಿದ್ದರು. ಇದಾದ ನಂತರ ಮತ್ತೆ ಮದುವೆಯ ಬಗ್ಗೆ ಯೋಚಿಸಲಿಲ್ಲ. ದೇಶದಲ್ಲಿ ಟಾಟಾ ಗ್ರೂಪ್ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ಇಡೀ ಜೀವನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಅವರು ವಿವರಿಸಿದ್ದರು.
ಅಮೆರಿಕದಲ್ಲಿದ್ದ ಸಂದರ್ಭದಲ್ಲಿ ಟಾಟಾಗೆ ಅಲ್ಲಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಸಂದರ್ಶನ ಒಂದರಲ್ಲಿ ಮಾತಾಡಿದ್ದ ರತನ್ ಟಾಟಾ, ನನ್ನ ಜೀವನದಲ್ಲಿ ಆ 2 ವರ್ಷಗಳು ತುಂಬ ಕಲರ್ಫುಲ್ ಆಗಿದ್ದವು ಎಂದಿದ್ದರು. ಆದರೆ, ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಆಕೆಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಭಾರತ-ಚೀನಾ ಯುದ್ಧವೂ ಪ್ರಾರಂಭವಾಯಿತು. ಕೊನೆಗೆ ಅಮೆರಿಕದಲ್ಲಿ ಬೇರೊಬ್ಬನನ್ನು ಮದುವೆಯಾದಳು. ಇದಾದ ನಂತರ ರತನ್ ಟಾಟಾ ತಮ್ಮ ಸಂಪೂರ್ಣ ಗಮನವನ್ನು ಟಾಟಾ ಗ್ರೂಪ್ ಮೇಲೆ ಕೇಂದ್ರೀಕರಿಸಿದ್ದರು.
ಸಂದರ್ಶನವೊಂದರಲ್ಲಿ ಪ್ರೀತಿ ವಿಫಲವಾದ ಕಾರಣಗಳನ್ನು ವಿವರಿಸಿದ್ದ ಟಾಟಾ, ಆಕೆ ನನ್ನ ಜೀವನದಲ್ಲಿ ಇದ್ದಿದ್ದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿತ್ತು ಎಂದಿದ್ದರು. ನನಗೆ ‘ಕ್ರಶ್’ ಇದ್ದಾರೆಯೇ ಎಂದು ನೀವು ಕೇಳಿದರೆ, ನಾನು ಮದುವೆಯ ಬಗ್ಗೆ ನಾಲ್ಕು ಬಾರಿ ಗಂಭೀರವಾಗಿ ಯೋಚಿಸಿದ್ದೆ ಎಂದು ಹೇಳುತ್ತೇನೆ. ಆದರೆ ಆಗೊಮ್ಮೆ ಈಗೊಮ್ಮೆ ಯಾವುದೋ ಭಯದಿಂದ ಹಿಂದೆ ಸರಿದಿದ್ದೆ ಎಂದೂ ಹೇಳುತ್ತೇನೆ. ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿದ್ದೆ. ಭಾರತಕ್ಕೆ ಮರಳಿದ ನಂತರ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದಿದ್ದರು.