ನವದೆಹಲಿ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಇನ್ನೊಂದು ತಿಂಗಳಷ್ಟೇ ಬಾಕಿಯಿದೆ. ಈ ಐತಿಹಾಸಿಕ ದಿನಕ್ಕಾಗಿ ಕೇವಲ ಭಾರತವಷ್ಟೇ ಅಲ್ಲ ವಿದೇಶಗಳೂ ಕಾತುರದಿಂದ ಕಾಯುತ್ತಿದೆ. ಇದೀಗ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ (Thailand) ವಿಶೇಷ ಮಣ್ಣನ್ನು (Soil) ಕಳುಹಿಸುತ್ತಿದೆ. ಹೌದು, ಅಯೋಧ್ಯೆಯಿಂದ 3,500 ಕಿ.ಮೀ ದೂರದಲ್ಲಿರುವ ಥೈಲ್ಯಾಂಡ್ನ ಅಯುತಾಯ (Ayutthaya) ನಗರದಿಂದ ವಿಶೇಷ ಮಣ್ಣನ್ನು ತರಲಾಗುತ್ತಿದೆ. 2024ರ ಜನವರಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರಕ್ಕೆ ಥೈಲ್ಯಾಂಡ್ ಮಣ್ಣನ್ನು ಕಳುಹಿಸುತ್ತಿದೆ.
ಭಾರತ–ಥೈಲ್ಯಾಂಡ್ ಸಂಬಂಧ:
ಥೈಲ್ಯಾಂಡ್ನ ಸಿಯಾಮ್ ಸಾಮ್ರಾಜ್ಯದಲ್ಲಿರುವ ಅಯುತಾಯಾವನ್ನು 13ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. ಸಿಯಾಮ್ ಸಾಮ್ರಾಜ್ಯದ ರಾಜಧಾನಿ ಮತ್ತು ಆರ್ಥಿಕ ಕೇಂದ್ರವೂ ಆಗಿತ್ತು. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಥೈಲ್ಯಾಂಡ್ನಿಂದ ಈ ರೀತಿ ಕಳುಹಿಸುತ್ತಿರುವುದು ಇದೇ ಮೊದಲಲ್ಲ.
ಈ ಹಿಂದೆ ರಾಮ ಮಂದಿರಕ್ಕಾಗಿ ಥೈಲ್ಯಾಂಡ್ನಿಂದ ವಿಶೇಷ ನೀರನ್ನು ಕಳುಹಿಸಲಾಗಿತ್ತು. ಈ ಕ್ರಿಯೆಯು ಥೈಲ್ಯಾಂಡ್ ಮತ್ತು ಭಾರತದ ನಡುವಿನ ಅನನ್ಯ ಸಾಂಸ್ಕೃತಿಕ ಸಂಬಂಧಗಳಿಂದ ಹುಟ್ಟಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಳವಾಗಲಿದೆ. ವಿಶ್ವ ಹಿಂದೂ ಪರಿಷತ್ (VHP) ಕೈಗೊಂಡ ಉಪಕ್ರಮ ಮತ್ತು ವಿಎಚ್ಪಿಯ ಥೈಲ್ಯಾಂಡ್ ಅಧ್ಯಾಯದ ಅಧ್ಯಕ್ಷ ಸುಶೀಲ್ಕುಮಾರ್ ಸರಾಫ್ ಅವರ ಸಹಾಯದಿಂದ ಇದು ಸಾಧ್ಯವಾಗಿದೆ.
ಭಾರತ ಮತ್ತು ಥೈಲ್ಯಾಂಡ್ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಥೈಲ್ಯಾಂಡ್ನ ಹಲವಾರು ರಾಜರು ರಾಮನ ವಂಶಸ್ಥರ ಭಾಗವಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬ ರಾಜನಿಗೂ ಅವರ ಹೆಸರಿನಲ್ಲಿ ರಾಮನ ಬಿರುದು ಇದೆ, ಇದು ಇಲ್ಲಿನ ಹಳೆಯ ಸಂಪ್ರದಾಯವಾಗಿದೆ ಎಂದು ವಿಶ್ವ ಹಿಂದೂ ಫೌಂಡೇಶನ್ (WHF) ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷರಾದ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.
ಥಾಯ್ಲೆಂಡ್ನ ರಾಜಧಾನಿ ಬ್ಯಾಂಕಾಕ್ ಶ್ರೀಮಂತ ಹಿಂದೂ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಸಾಕ್ಷಿಯಾಗುವ 51 ದೇಶಗಳನ್ನು ನಾವು ಗುರುತಿಸಿದ್ದೇವೆ. ಸಮಾರಂಭವನ್ನು ಬ್ಯಾಂಕಾಕ್ನಲ್ಲಿ ನೇರಪ್ರಸಾರ ಮಾಡಲಾಗುವುದು ಮತ್ತು ಪ್ರಪಂಚದಾದ್ಯಂತದ ಹಿಂದೂಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೀರ್ತನೆ, ಭಜನೆ, ಪೂಜೆ ಮತ್ತು ಪಾರಾಯಣದಲ್ಲಿ ತೊಡಗುತ್ತಾರೆ ಎಂದು ಸ್ವಾಮಿ ವಿಜ್ಞಾನಾನಂದ ಹೇಳಿದರು.