ಇಂದು ಅಂತಾರಾಷ್ಟ್ರೀಯ ಪುರುಷರ ದಿನ. ಪ್ರತಿ ವರ್ಷ ನವೆಂಬರ್ 19ರಂದು ವಿಶ್ವ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪುರುಷರು ವಹಿಸುವ ಪ್ರಮುಖ ಪಾತ್ರಗಳನ್ನು, ನಿರ್ವಹಿಸುವ ಜವಾಬ್ದಾರಿಯನ್ನು, ತೋರಿಸುವ ಪ್ರೀತಿಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. . ಪುರುಷರು ಈ ಸಮಾಜದ ಪ್ರಮುಖ ಸ್ತಂಭಗಳು. ಆದರೆ ಯಾರೂ ಕೂಡಾ ಪುರುಷರ ಬಗ್ಗೆ, ಪುರುಷರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ,
Health Tips: ನಿಮಗೆ ಗೊತ್ತೆ.? “ದೊಡ್ಡಪತ್ರೆ”ಯಲ್ಲಿದೆ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಯ ನಿವಾರಣೆಯ ಗುಣ!
ಅವರು ವಹಿಸುವ ಪ್ರತಿಯೊಂದು ಪಾತ್ರದಲ್ಲೂ ಅವರ ಕೊಡುಗೆ ಮತ್ತು ಸಮರ್ಪಣೆಯಿರುತ್ತದೆ. ಅದು ತಂದೆ ಯಾಗಿರಲಿ, ಸಂಗಾತಿ ಯಾಗಿರಲಿ ಅಥವಾ ಮಗನಾಗಿರಲಿ. ತ್ಯಾಗ, ಸಮರ್ಪಣೆ, ಜವಾಬ್ದಾರಿ, ಕಾಳಜಿ ಮತ್ತು ಪ್ರೀತಿ. ಈ ಮೌಲ್ಯಗಳನ್ನು ಆಚರಿಸಲು ಮತ್ತು ಪುರುಷತ್ವದ ಸಕಾರಾತ್ಮಕ ಅನಿಸಿಕೆಗಳನ್ನು ಉತ್ತೇಜಿಸಲು, ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಪುರುಷರ ದಿನಾಚರಣೆಯ ಇತಿಹಾಸ:
ಅಂತರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಮೊದಲ ಬಾರಿಗೆ 1992 ರಲ್ಲಿ ಥಾಮಸ್ ಓಸ್ಟರ್ ಎಂಬವರು ಆಚರಿಸಿದರು ಎಂದು ಹೇಳಲಾಗುತ್ತದೆ. ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಅವರು ಜಾರಿಗೆ ತಂದರು. ಆದರೆ ಈ ಆಚರಣೆಗೆ ಅಷ್ಟೇನೂ ಪ್ರೋತ್ಸಾಹ ದೊರೆಯದ ಕಾರಣ 1995 ರಲ್ಲಿ ನಿಲ್ಲಿಸಬೇಕಾಯಿತು.
ನಂತರ 1999 ರಲ್ಲಿ ಮತ್ತೊಮ್ಮೆ ಪುರುಷರ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ವಾಸ್ತವವಾಗಿ ಈ ದಿನ ವೆಸ್ಟ್ ಇಂಡೀಸ್ನ ಭಾರತೀಯ ಮೂಲದ ಪ್ರೊಫೆಸರ್ ಡಾ. ಜೊರೋಮ್ ತಿಲಕ್ ಸಿಂಗ್ ಎಂಬವರು 1999 ನವೆಂಬರ್ 19 ರಂದು ತಮ್ಮ ತಂದೆಯ ಜನ್ಮ ದಿನವನ್ನು ಅಂತರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಿದರು. ಲಿಂಗ ಸಮಾನತೆಯನ್ನು ಉತ್ತೇಜಿಸಲು, ಪುರುಷರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಈ ಸಮಾಜದಲ್ಲಿ ಧ್ವನಿ ಎತ್ತಬೇಕು ಎಂದು ಈ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಅಂತರಾಷ್ಟ್ರೀಯ ಪುರುಷರ ದಿನದ ಆಚರಣೆ ಯಾವಾಗ ಪ್ರಾರಂಭವಾಯಿತು?
ಭಾರತದಲ್ಲಿ ಅಂತರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಆಚರಿಸಲು ಹಲವು ವರ್ಷಗಳೇ ಬೇಕಾಯಿತು. 2007 ರ ನವೆಂಬರ್ 19 ರಂದು ಭಾರತದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪುರುಷರ ದಿನವನ್ನು ಆರಿಸಲಾಯಿತು. ಹೈದರಾಬಾದ್ ಮೂಲದ ಲೇಖಕಿ ಉಮಾ ಚಲ್ಲಾ ಅವರು 2007 ರಲ್ಲಿ ಇದನ್ನು ಪ್ರಾರಂಭಿಸಿದರು.
ಅಂತರಾಷ್ಟ್ರೀಯ ಪುರುಷರ ದಿನದ ಮಹತ್ವ:
ಪುರುಷರ ಕಲ್ಯಾಣದ ಮೇಲೆ ಪ್ರಯತ್ನಗಳನ್ನು ಕೇಂದ್ರೀಕರಿಸಲು ಮತ್ತು ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪುರುಷರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು, ಪುರುಷರ ಸಕಾರಾತ್ಮಕ ಗುಣಗಳನ್ನು ಶ್ಲಾಘಿಸುವುದು, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪುರುಷರ ಸಾಧನೆಯನ್ನು ಗೌರವಿವುದು ಹಾಗೂ ಮುಖ್ಯವಾಗಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಅಂತರಾಷ್ಟ್ರೀಯ ಪುರುಷರ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
ನಮ್ಮ ಜೀವನದಲ್ಲಿ ಮಹಿಳೆಯರ ಕೊಡುಗೆಗೆ ಧನ್ಯವಾದ ಹೇಳಲು ನಾವು ಮಹಿಳಾ ದಿನ, ತಾಯಂದಿರ ದಿನ ಮತ್ತು ಸಹೋದರಿಯರ ದಿನವನ್ನು ಆಚರಿಸುತ್ತೇವೆ. ಆದರೆ ನಮ್ಮ ಜೀವನದಲ್ಲಿ ನಮ್ಮ ತಂದೆ, ಸಹೋದರ, ಬಾಳ ಸಂಗಾತಿ ಮತ್ತು ಸ್ನೇಹಿತರ ಕೊಡುಗೆಯನ್ನು ಗೌರವಿಸಲು ನಾವು ಆಗಾಗ್ಗೆ ಮರೆಯುತ್ತೇವೆ. ಆದರೆ ಅಂತರಾಷ್ಟ್ರೀಯ ಪುರುಷರ ದಿನದ ಮೂಲಕ ನಾವು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪುರುಷರಿಗೆ ಧನ್ಯವಾದಗಳನ್ನು ತಿಳಿಸಬಹುದು.