ಟೀಮ್ ಇಂಡಿಯಾದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಈ ಯಶಸ್ಸಿನ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಆಯ್ಕೆಯಾದರು. ಈ ಸಲುವಾಗಿ ಕೆಕೆಆರ್ ಬಳಗವನ್ನು ಅವರು ತೊರೆಯಬೇಕಾಯಿತು. ಇದೀಗ ಮೂರು ಬಾರಿಯ ಚಾಂಪಿಯನ್ಸ್ ಕೆಕೆಆರ್ ತಂಡ ತನ್ನ ಹೊಸ ಮೆಂಟರ್ ಸಲುವಾಗಿ ಹುಡುಕಾಟ ಶುರುಮಾಡಿದೆ.
ಈ ನಡುವೆ ಕೆಕೆಆರ್ ಮೆಂಟರ್ ಸ್ಥಾನಕ್ಕೆ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್, ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ ಸಂಗಕ್ಕಾರ ಮತ್ತು ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿಬಂದಿತ್ತು. ಆದರೆ, ದ್ರಾವಿಡ್ ಈಗಾಗಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಾಗಿದೆ. ಈಗ ಪಾಂಟಿಂಗ್ ಮತ್ತು ಸಂಗಕ್ಕಾರ ನಡುವೆ ಪೈಪೋಟಿ ಇದೆಯಾದರೂ, ಇತ್ತೀಚಿನ ವರದಿಗಳ ಪ್ರಕಾರ ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜಾಕ್ ಕಾಲಿಸ್ ಕೆಕೆಆರ್ನ ನೂತನ ಮೆಂಟರ್ ಆಗುವ ಸಾಧ್ಯತೆ ಇದೆ ಎಂಬುದು ಬೆಳಕಿಗೆ ಬಂದಿದೆ. ಅಂದಹಾಗೆ ಜಾಕ್ ಕಾಲಿಸ್, 2012 ಮತ್ತು 2014ರಲ್ಲಿ ಕೆಕೆಆರ್ ತಂಡ ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲಿ ಆಗಿನ ನಾಯಕ ಗೌತಮ್ ಗಂಭೀರ್ ಜೊತೆಗೆ ತಂಡದ ಪ್ರಮುಖ ಸದಸ್ಯ ಆಗಿದ್ದರು.
ಐಪಿಎಲ್ 2025 ಟೂರ್ನಿ ಸಲುವಾಗಿ 2024ರ ಡಿಸೆಂಬರ್ನಲ್ಲಿ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಇದಕ್ಕೂ ಮೊದಲೇ ಕೆಕೆಆರ್ ತಂಡ ತನ್ನ ನೂತನ ಮೆಂಟರ್ ಆಯ್ಕೆ ಮಾಡಿ ಆಟಗಾರರ ಹರಾಜು ಪ್ರಕ್ರಿಯೆಗೆ ರಣನೀತಿ ರಚಿಸಲು ಶುರು ಮಾಡಲಿದೆ. ಇನ್ನು ಗಂಭೀರ್ ಬೆನ್ನಲ್ಲೇ ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮತ್ತು ಬ್ಯಾಟಿಂಗ್ ಕೋಚ್ ರಯಾನ್ ಟೆನ್ಡೆಷ್ಕಾಟೆ ಕೂಡ ಕೆಕೆಆರ್ ಬಳಗ ತೊರೆದು ಟೀಮ್ ಇಂಡಿಯಾ ಸೇರಿಕೊಂಡಿದ್ದಾರೆ. ಈ ಸ್ಥಾನಗಳಿಗೂ ಹೊಸಬರನ್ನು ತರಲು ಕೆಕೆಆರ್ ಫ್ರಾಂಚೈಸಿ ಹುಡುಕಾಟ ಶುರು ಮಾಡಿದೆ.
ಕಳೆದ 5 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿರುವ ರಿಕಿ ಪಾಂಟಿಂಗ್ ಕೂಡ ಕೆಕೆಆರ್ ಬಳಗ ಸೇರುವ ಸಾಧ್ಯತೆ ಇದೆ. ರಿಕಿ ಪಾಂಟಿಂಗ್ ಸಾರಥ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2020ರಲ್ಲಿ ರನ್ನರ್ಸ್ಅಪ್ ಸ್ಥಾನ ಪಡೆದಿತ್ತು. ಆದರೆ, ಟ್ರೋಫಿ ಗೆಲುವು ಸಾಧ್ಯವಾಗಿರಲಿಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಾರ್ವಕಾಲಿಕ ಅತ್ಯಂತ ಯಶಸ್ವಿ ಕ್ಯಾಪ್ಟನ್ ಆಗಿರುವ ರಿಕಿ ಪಾಂಟಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೇವೆಯಿಂದ ಬಿಡುಗಡೆ ಆಗಿದ್ದಾರೆ. ಹೀಗಾಗಿ ಕೆಕೆಆರ್ ಮೆಂಟರ್ ಸ್ಥಾನಕ್ಕೆ ಪಂಟರ್ ಕೂಡ ಅತ್ಯುತ್ತಮ ಆಯ್ಕೆ.