ಬೆಂಗಳೂರು: ಎರಡು ದಿನದ ಮಳೆಯ ಪ್ರಭಾವದಿಂದ ಬೆಂಗಳೂರಿನಲ್ಲಿ (Bengaluru) ಹೊಸದಾಗಿ ನಿರ್ಮಿಸಿದ ರಸ್ತೆಗಳು ಬಾಯಿ ತೆರೆದಿವೆ. ಒಂದು ಕಡೆ ಮಳೆ ಜನರನ್ನು ಪರದಾಡುವಂತೆ ಮಾಡಿದರೆ ಇನ್ನೊಂದೆಡೆ ರಸ್ತೆ ಗುಂಡಿಗಳಿಂದ ಅನಾಹುತ ಹೆಚ್ಚಾಗುತ್ತಿದೆ.
ಕೆಲವು ದಿನಗಳ ಹಿಂದೆ ನಗರದ ಎಲ್ಲಾ ವಲಯದಲ್ಲೂ ಗುಂಡಿ ಲೆಕ್ಕ ಮಾಡಿ ಮುಚ್ಚುವ ಕೆಲಸ ಮಾಡಿದ್ದೇವೆ ಎಂದು ಎದೆಯುಬ್ಬಿಸಿದ್ದ ಬಿಬಿಎಂಪಿಗೆ (BBMP) ಎರಡೇ ದಿನದಲ್ಲಿ ಮಳೆರಾಯ ಗುಂಡಿ ಶಾಕ್ ಕೊಟ್ಟಿದ್ದಾನೆ. ನಗರದಲ್ಲಿ ಸುರಿದ ಎರಡು ದಿನದ ಮಳೆಗೆ ಹೊಸದಾಗಿ ಹಾಕಿದ ಡಾಂಬಾರು ರಸ್ತೆಗಳಲ್ಲಿ ಗುಂಡಿ ಬಾಯ್ತೆರೆದಿವೆ.
ಎರಡು ದಿನದ ಮಳೆಗೆ ಕೇವಲ ಒಂದೇ ವಾರದಲ್ಲಿ ಡಾಂಬರು ಕಿತ್ತು ಬಂದಿದೆ. ಜಯನಗರದ ಸೌತ್ ಎಂಡ್ ಸರ್ಕಲ್ನ ಶೆಲ್ ಪೆಟ್ರೋಲ್ ಬಂಕ್ ಹಿಂಭಾಗದ ರಸ್ತೆಯಲ್ಲಿ ಬಿಡಬ್ಯೂಎಸ್ಎಸ್ಬಿ ಪೈಪ್ ಲೈನ್ ಕಾಮಗಾರಿ ಮುಗಿಸಿ 150 ಮೀಟರ್ ರಸ್ತೆಯಲ್ಲಿ ಮಾಡಿದ್ದ ರಸ್ತೆ ಕೆಲಸ ಸಂಪೂರ್ಣ ಎದ್ದು ಬಂದಿದೆ. ಮಾತ್ರವಲ್ಲ ಅತ್ತಿಗುಪ್ಪೆ ಸರ್ಕಲ್, ಕಾಮಾಕ್ಷಿ ಪಾಳ್ಯ-ಸುಮ್ಮನಹಳ್ಳಿ ರಸ್ತೆಯಲ್ಲೂ ಗುಂಡಿ ಬಾಯಿ ತೆರೆದಿದೆ.
ಎರಡು ದಿನದ ಮಳೆಗೆ ನಗರದ ರಸ್ತೆಗಳು ಮತ್ತೆ ಗುಂಡಿಮಯವಾಗಿದೆ. ಯಾವಾಗಲೋ ಒಮ್ಮೆ ಗುಂಡಿ ಮುಚ್ಚೋದಲ್ಲ. ಅದನ್ನ ನಿರ್ವಹಣೆ ಮಾಡುವ ಕೆಲಸ ಬಿಬಿಎಂಪಿ ಮಾಡಬೇಕಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.