ಬೆಂಗಳೂರು:– ಅಧಿಕಾರ ಇರಲಿ, ಬಿಡಲಿ ಪಕ್ಷಕ್ಕಾಗಿ ನನ್ನ ಸೇವೆ ನಿರಂತರ ಆಗಿರಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದು, ಅವಕಾಶ ನೀಡಿದ್ದ ವರಿಷ್ಠರು, ಸಹಕಾರ ನೀಡಿದ್ದ ಎಲ್ಲರನ್ನೂ ಸ್ಮರಿಸುತ್ತಾ, ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ.
ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಹಿರಂಗ ಪತ್ರದ ಮೂಲಕ ಪಕ್ಷದ ಇಡೀ ಸಂಘಟನೆಗೆ ವಂದನೆ ತಿಳಿಸಿದ್ದಾರೆ.
ಮಾತೃ ಸಮಾನವಾಗಿರುವ ನಮ್ಮ ಪಕ್ಷ ಮತ್ತು ಹಿರಿಯರು ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ, ರಾಜ್ಯದ ಅತ್ಯುನ್ನತ ಜವಾಬ್ದಾರಿ ವಹಿಸಿದ ಈ 4 ವರ್ಷ 3 ತಿಂಗಳ ಅವಧಿಯಲ್ಲಿ ಈ ಹೊಣೆಗಾರಿಕೆಯನ್ನು ನಿಮ್ಮೆಲ್ಲರ ಸಹಕಾರದಿಂದ ಪರಿಪೂರ್ಣತೆಯಿಂದ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರ್ಗದರ್ಶನ ಮಾಡಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ, ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಈಗ ರಾಷ್ಟ್ರೀಯ ಗೃಹಸಚಿವರಾಗಿರುವ ಅಮಿತ್ ಶಾ ಅವರಿಗೆ, ಪಕ್ಷದ ಪ್ರಸ್ತುತ ರಾಷ್ಟ್ರಾಧ್ಯಕ್ಷರಾದ ಜೆ ಪಿ ನಡ್ಡಾ ಅವರಿಗೆ, ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುತ್ತಾ ಬಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ ಎಲ್ ಸಂತೋಷ್ ಅವರಿಗೆ, ನಮ್ಮ ಪಕ್ಷದ ಶಕ್ತಿ ಯಡಿಯೂರಪ್ಪ ಅವರಿಗೆ, ಪಕ್ಷದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರುಗಳಿಗೆ, ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ, ಮೋರ್ಚಾಗಳ ಮುಖಂಡರುಗಳಿಗೆ ಹಾಗೂ ವಿಶೇಷವಾಗಿ ನಮ್ಮ ಪಕ್ಷದ ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು ಎಂದು ಪತ್ರದ ಮೂಲಕ ಕಟೀಲ್ ವಂದನೆಗಳನ್ನು ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಕಾಯಾ, ವಾಚಾ, ಮನಸಾ ಪಕ್ಷದ ಸೇವೆ ಮಾಡುವ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಕೈ ಹಿಡಿದು ಮುನ್ನಡೆಸಿದ ಎಲ್ಲಾ ಪ್ರೀತಿಪಾತ್ರರಿಗೆ ಧನ್ಯವಾದಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆ, ದೈವ ದೇವರುಗಳ ಅನುಗ್ರಹದಿಂದ ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ. ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವೆ ಎಂದು ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ.