ಬೆಂಗಳೂರು: ವಿಶ್ವಕಪ್ 2023ರ (World Cup 2023) ಪಂದ್ಯಾವಳಿಯ ಕೊನೆಯ 3 ಪಂದ್ಯಗಳು ಬಾಕಿ ಉಳಿದಿವೆ. ಇನ್ನು 3 ಪಂದ್ಯಗಳು ನಡೆದರೆ ವಿಶ್ವ ಕ್ರಿಕೆಟ್ ಏಕದಿನ ಪಂದ್ಯಗಳ ಸಾಮ್ರಾಟ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇನ್ನೆರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆದರೆ ವಿಶ್ವ ವಿಜೇತ ತಂಡ ಯಾವುದು ಎಂಬುದು ಗೊತ್ತಾಗಲಿದೆ.
ಸೆಮಿಫೈನಲ್ ಹಣಾಹಣಿಗೆ ಮುಂಬೈನ ವಾಂಖೆಡೆ, ಕೋಲ್ಕತ್ತಾದ ಈಡನ್ ಗಾರ್ಡನ್ ವೇದಿಕೆ ಸಿದ್ಧವಾಗಿದ್ದು ಮೊದಲ ಸೆಮಿಫೈನಲ್ ನಲ್ಲಿ ಟೀಂ ಇಂಡಿಯಾ-ನ್ಯೂಜಿಲೆಂಡ್ (India Vs Newzealand) ತಂಡದ ವಿರುದ್ಧ ಸೆಣಸಲು ಸಿದ್ಧವಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 15ರಂದು ಮೊದಲ ಸೆಮಿಫೈನಲ್ ನಡೆಯಲಿದೆ. ಟೂರ್ನಿಯ 2ನೇ ಸೆಮಿಫೈನಲ್ (World Cup SemiFinal) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನವೆಂಬರ್ 16ರಂದು ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೆಮಿಫೈನಲ್ ಮ್ಯಾಚ್ ವೇಳೆ ಮಳೆ ಬಂದರೆ ಏನಾಗಬಹುದು..? ಮಳೆ ಬಂದರೆ ಯಾವ ತಂಡ ಫೈನಲ್ ಪ್ರವೇಶಿಸಬಹುದು…? ಮುಂದೇನಾಗಬಹುದು ಎಂಬ ಕುತೂಹಲ ನಿಮಗಿದ್ದರೆ ಮುಂದಕ್ಕೆ ಓದಿ
ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಐಸಿಸಿಯು ರಿಸರ್ವ್ ಡೇ ನಿಗದಿ ಮಾಡಿದೆ. ಒಂದು ವೇಳೆ ಸೆಮಿಫೈನಲ್ ನಡೆಯುವ ದಿನ ಮಳೆ ಬಂದು ಒಂದೇ ದಿನ ಪಂದ್ಯ ಪೂರ್ಣವಾಗದಿದ್ದರೆ, ರಿಸರ್ವ್ ಡೇ ದಿನ ಆಟ ಮುಂದುವರಿಸಬಹುದು. ಹಿಂದಿನ ದಿನ ಆಟ ನಿಂತಲ್ಲಿಂದಲೇ ಮತ್ತೆ ಶುರುವಾಗುತ್ತದೆ. 2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಪಂದ್ಯಕ್ಕೆ ಈ ರೀತಿ ಮೀಸಲು ದಿನ ನಿಗದಿಯಾಗಿತ್ತು.
ರಿಸರ್ವ್ ಡೇ ದಿನವೂ ಮಳೆ ಬಂದರೆ…?: ರಿಸರ್ವ್ ಡೇ ದಿನ ಮಳೆ ಬಂದರೆ ಏನಾಗಬಹುದು ಎಂಬ ಕುತೂಹಲವೂ ನಿಮಗಿರುತ್ತೆ. ರಿಸರ್ವ್ ಡೇ ದಿನವೂ ಮಳೆ ಬಂದು ಪಂದ್ಯ ನಡೆಯದಿದ್ದರೆ ಪಾಯಿಂಟ್ ಟೇಬಲ್ ಆಧಾರದಲ್ಲಿ ತಂಡಗಳು ಫೈನಲ್ ಪ್ರವೇಶಿಸಲಿದೆ. ಅರ್ಥಾತ್ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಮಳೆಯಿಂದ ನಡೆಯದಿದ್ದರೂ ಟೀಂ ಇಂಡಿಯಾ ಫೈನಲ್ ಪ್ರವೇಶಿಸಲಿದೆ. ಸದ್ಯ 9ಕ್ಕೆ 9 ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ
ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ (Australia Vs South Africa) ನಡುವಿನ ಪಂದ್ಯಕ್ಕೂ ಇದೇ ನಿಯಮ ಅನ್ವಯವಾಗಲಿದೆ. ಮಳೆ ಬಂದು ಪಂದ್ಯವೇ ನಡೆಯದಿದ್ದರೆ ದಕ್ಷಿಣ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಸದ್ಯ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 2ನೇ ಹಾಗೂ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.