ನೋಟು ಸ್ವಲ್ಪ ಹರಿದ ಸ್ಥಿತಿಯಲ್ಲಿದ್ರಂತೂ ಯಾರೂ ತೆಗೆದುಕೊಳ್ಳುವುದಿಲ್ಲ. ಯಾರೋ ರಸ್ತೆಬದಿ ವ್ಯಾಪಾರಿಗಳೋ ಅಥವಾ ಬ್ಯಾಂಕ್ ಶಾಖೆಯಿಂದಲೂ ಅಥವಾ ಇನ್ಯಾರೋ ವ್ಯಕ್ತಿಯಿಂದ ಇಂಥ ನೋಟು ಸಿಕ್ಕಿದ್ರೆ ತಕ್ಷಣವೇ ಹಿಂತಿರುಗಿಸಬಹುದು. ಆದರೆ, ಎಟಿಎಂ ಯಂತ್ರದಿಂದಲೇ ಇಂಥ ನೋಟು ಹೊರಬಂದ್ರೆ ಆಗ ಏನ್ ಮಾಡೋದು? ಎಟಿಎಂ ಮಷಿನ್ ಗೆ ಹಿಂತಿರುಗಿಸಲು ಸಾಧ್ಯವಿಲ್ಲ.
ಇಂಥ ಸಂದರ್ಭಗಳಲ್ಲಿ ಏನ್ ಮಾಡ್ಬೇಕು ಎಂಬುದೇ ಬಹುತೇಕರಿಗೆ ತಿಳಿಯೋದಿಲ್ಲ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಾರ ಇಂಥ ಹಾಳಾದ ಕರೆನ್ಸಿ ನೋಟುಗಳನ್ನು ಕೆಲವೊಂದು ಪ್ರಕರಣಗಳಲ್ಲಿ ಹಿಂತಿರುಗಿಸಿ ಹೊಸ ನೋಟುಗಳನ್ನು ಪಡೆಯಬಹುದು. ಅದು ಹೇಗೆ? ಇಂಥ ಹಾಳಾದ ಕರೆನ್ಸಿ ನೋಟುಗಳನ್ನು ಎಲ್ಲಿ ಹಿಂತಿರುಗಿಸಬಹುದು? ಇಲ್ಲಿದೆ ಮಾಹಿತಿ.
ರಿಸರ್ವ್ ಬ್ಯಾಂಕ್ ನಿಯಮವೇನು? : ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿದ ಮಾರ್ಗಸೂಚಿ ಗಳ ಪ್ರಕಾರ, ನಿಮ್ಮ ಬಳಿ ಹರಿದ, ವಿರೂಪಗೊಂಡ ಅಥವಾ ಹಾನಿಗೊಳಗಾದ ಕರೆನ್ಸಿ ನೋಟು ಇದ್ದರೆ ಅದನ್ನು ನೀವು ಬ್ಯಾಂಕ್ಗೆ ನೀಡಬೇಕು. ಹರಿದ ಪ್ರಮಾಣದ ಮೇಲೆ ಬ್ಯಾಂಕ್ ಮೌಲ್ಯವನ್ನು ನಿರ್ಧರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ 2009ರಡಿ ಈ ವಿನಿಮಯ ನಡೆಯುತ್ತದೆ.
ಎಲ್ಲಿ ನಿಮ್ಮ ನೋಟ್ ಬದಲಿಸಬೇಕು? : ನಿಮ್ಮ ಸಮೀಪದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಈ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಉದ್ಯೋಗಿಗಳು ನಿಮ್ಮ ನೋಟು ವಿನಿಮಯವನ್ನು ನಿರಾಕರಿಸುವಂತಿಲ್ಲ. ವಿಕೃತ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಲ್ಲಾ ಬ್ಯಾಂಕ್ಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಹಾಗಾಗಿ ಬ್ಯಾಂಕ್ ಗಳು ತಮ್ಮ ಶಾಖೆಯಲ್ಲಿ ಇದ್ರ ಬಗ್ಗೆ ಮಾಹಿತಿ ಬೋರ್ಡ್ ಹಾಕಿರುತ್ತವೆ. ಕೆಲ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವಿಲ್ಲ.
ಸಣ್ಣ ಮೌಲ್ಯದ ನೋಟು : ನಿಮ್ಮ ಬಳಿಯಿರುವ ಐದು ರೂಪಾಯಿ, ಹತ್ತು ರೂಪಾಯಿ, ಇಪ್ಪತ್ತು ರೂಪಾಯಿ ಮತ್ತು ಐವತ್ತು ರೂಪಾಯಿ ನೋಟುಗಳು ಹರಿದಿದ್ದರೆ, ನೀವು ಅದನ್ನು ಬ್ಯಾಂಕ್ ಶಾಖೆಗೆ ನೀಡಬೇಕು. ಈ ನೋಟುಗಳು ಶೇಕಡಾ 50ರಷ್ಟು ಹರಿದಿದ್ದರೆ ಅಥವಾ ಹಾಳಾಗಿದ್ದರೆ ಆಗ ನಿಮಗೆ ನೋಟಿನ ಸಂಪೂರ್ಣ ಮೌಲ್ಯ ಸಿಗಲಿದೆ.
ಭದ್ರತಾ ಚಿಹ್ನೆ : ನೋಟು ಬದಲಾವಣೆಗೆ ಪ್ರಮುಖ ನಿಯಮವೆಂದರೆ ಸೀರಿಯಲ್ ನಂಬರ್ (Serial Number), ಗಾಂಧೀಜಿ ವಾಟರ್ಮಾರ್ಕ್ , ಗೌವರ್ನರ್ ಸಹಿ ಮುಂತಾದ ಭದ್ರತಾ ಚಿಹ್ನೆಗಳು ಗೋಚರಿಸಬೇಕು. ಇವು ನೋಟಿನಲ್ಲಿದ್ದರೆ ಬ್ಯಾಂಕ್, ನೋಟು ಸ್ವೀಕರಿಸಲು ನಿರಾಕರಿಸುವಂತಿಲ್ಲ.
ಚಿಂದಿ ನೋಟುಗಳ ವಿನಿಮಯ ಎಲ್ಲಿ? : ನಿಮ್ಮ ಬಳಿ ಇರುವ ನೋಟುಗಳು ತುಂಬಾ ಹರಿದಿದ್ದು, ಹಲವು ತುಂಡುಗಳಾಗಿದ್ದರೆ, ನೀವು ಈ ನೋಟುಗಳನ್ನು ಆರ್ಬಿಐ ಶಾಖೆಯಲ್ಲಿ ಬದಲಿಸಬೇಕಾಗುತ್ತದೆ. ಈ ನೋಟುಗಳನ್ನು ನೀವು ಅಂಚೆ ಮೂಲಕ ಕಳುಹಿಸಬೇಕಾಗುತ್ತದೆ. ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್, ನೋಟು ಎಷ್ಟು ಮೌಲ್ಯಯದ್ದು ಎಂಬ ಮಾಹಿತಿಯನ್ನು ಬ್ಯಾಂಕ್ ಗೆ ನೀಡಬೇಕಾಗುತ್ತದೆ.
ಬ್ಯಾಂಕ್ ಶುಲ್ಕ : ಹರಿದ ನೋಟು ಬದಲಾಯಿಸಿಕೊಳ್ಳಲು ಬ್ಯಾಂಕ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಈ ಸೇವೆಯನ್ನು ಬ್ಯಾಂಕ್ ಉಚಿತವಾಗಿ ಒದಗಿಸುತ್ತದೆ. ಉದ್ದೇಶಪೂರ್ವಕವಾಗಿ ನೋಟುಗಳನ್ನು ವಿರೂಪಗೊಳಿಸಲಾಗಿದೆ ಎಂದು ಬ್ಯಾಂಕ್ಗೆ ಅನುಮಾನ ಬಂದರೆ, ಅವುಗಳನ್ನು ಬದಲಿಸಲು ಒಪ್ಪುವುದಿಲ್ಲ.
ಹರಿದ ನೋಟುಗಳನ್ನು ಏನು ಮಾಡಲಾಗುತ್ತೆ? : ಹರಿದ ನೋಟುಗಳನ್ನು RBI ಬಳಕೆಯಿಂದ ತೆಗೆಯುತ್ತದೆ.ಹೊಸ ನೋಟುಗಳ ಮುದ್ರಣಕ್ಕೆ ಮುಂದಾಗುತ್ತದೆ. ಹರಿದ ನೋಟುಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ,ಮರುಬಳಕೆ ಮಾಡುತ್ತದೆ.
ಈ ಷರತ್ತುಗಳು ಅನ್ವಯಿಸುತ್ತವೆ
ಕರೆನ್ಸಿ ನೋಟುಗಳನ್ನು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ವಿನಿಮಯಕ್ಕೆ ಸ್ವೀಕರಿಸಲಾಗುತ್ತದೆ. ಸ್ವಲ್ಪ ತುಂಡಾಗಿರುವ, ಕಲೆಯಿರುವ, ಮಣ್ಣಾಗಿರುವ ಅಥವಾ ಎರಡು ತುಂಡಾಗಿರುವ ನೋಟುಗಳನ್ನು ಕೊಳಕಾದ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಇಂಥ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ಆದರೆ, ನೋಟಿನ ಮೇಲಿರುವ ಸಂಖ್ಯೆಗಳಿರುವ ಭಾಗ ತುಂಡಾಗಿರಬಾರದು. ನೋಟುಗಳಲ್ಲಿ ಅಗತ್ಯ ಭಾಗಗಳು ಇಲ್ಲದಿದ್ದರೆ ಅಂಥವುಗಳನ್ನು ತುಂಡಾಗಿರುವ ಅಥವಾ ಕತ್ತರಿಸಲ್ಪಟ್ಟ ನೋಟುಗಳು ಎಂದು ಆರ್ ಬಿಐ ಪರಿಗಣಿಸುತ್ತದೆ.
ಕರೆನ್ಸಿ ವಿತರಣಾ ಪ್ರಾಧಿಕಾರ, ಕ್ಲಾಸ್, ಪ್ರಾಮಿಸ್, ಸಹಿ, ಅಶೋಕ ಸ್ತಂಭ, ಲಾಂಛನ, ಮಹಾತ್ಮ ಗಾಂಧಿ ಫೋಟೋ ಹಾಗೂ ವಾಟರ್ ಮಾರ್ಕ್ ಇರದಿದ್ರೆ ಅಂಥ ನೋಟುಗಳನ್ನು ತುಂಡಾಗಿರುವ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಈ ನೋಟುಗಳನ್ನು ಸುಲಭವಾಗಿ ವಿನಿಮಯ ಮಾಡಬಹುದು. ಆದರೆ, ವಿನಿಮಯ ಮೌಲ್ಯವನ್ನು ಆರ್ ಬಿಐ ನೋಟು ರೀಫಂಡ್ ನಿಯಮಗಳಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ತುಂಬಾ ಕೊಳಕಾಗಿರುವ ಹಾಗೂ ಸುಟ್ಟು ಹೋಗಿರುವ ಮುಂತಾದ ಸ್ಥಿತಿಯಲ್ಲಿರುವ ನೋಟುಗಳನ್ನು ಯಾವುದೇ ಬ್ಯಾಂಕಿನ ಶಾಖೆಯಲ್ಲಿ ವಿನಿಮಯಕ್ಕೆ ಪರಿಗಣಿಸಲಾಗೋದಿಲ್ಲ.