ಶಿವಮೊಗ್ಗ:- ಸತ್ತವರ ಹೆಸರಲ್ಲಿ ಹಣ ತಿಂದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೋವಿಡ್ ವೇಳೆ ಸತ್ತವರ ಹೆಸರಲ್ಲಿ ₹40 ಸಾವಿರ ಕೋಟಿ ಭ್ರಷ್ಟಾಚಾರ ಮಾಡಿರುವ ಬಿಜೆಪಿಯವರಿಗೆ ಚೆಕ್ ಬೌನ್ಸ್ ನೆಪದಲ್ಲಿ ನನ್ನ ರಾಜೀನಾಮೆ ಕೇಳುವ ನೈತಿಕತೆ ಇದೆಯೇ’ ಎಂದರು.
ಕೋವಿಡ್ ಸಂದರ್ಭದಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಹೆಸರು ಕೇಳಿ ಬಂದಿದೆ. ಹಾಗಿದ್ದರೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನನ್ನ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ’ ಎಂದರು.
‘ಚೆಕ್ ಮೂಲಕ ಲಂಚ ಪಡೆದು, ಸಹಿ ಮಾಡಿ ಅಪ್ಪನ ಜೈಲಿಗೆ ಕಳುಹಿಸುವ ಕೆಲಸ ನಾನು ಮಾಡಿಲ್ಲ ಎಂದು ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಮಧು ಬಂಗಾರಪ್ಪ, ದಮ್ಮು, ತಾಕತ್ತು ಇದ್ದರೆ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪಗಳಿಗೆ ವಿಜಯೇಂದ್ರ ಉತ್ತರಿಸಲಿ’ ಎಂದು ಒತ್ತಾಯಿಸಿದರು.
‘ನಮ್ಮ ತಂದೆಯ ವಿರುದ್ಧ ಸಿಬಿಐ ಭ್ರಷ್ಟಾಚಾರದ ಹೆಸರಲ್ಲಿ ಪ್ರಕರಣ ದಾಖಲಿಸಿದಾಗ ಅದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಾರದೇ ವಿಚಾರಣೆ ಎದುರಿಸಿ ಕ್ಲೀನ್ ಚಿಟ್ ಪಡೆದಿದ್ದರು’ ಎಂದು ಸ್ಮರಿಸಿದ ಮಧು ಬಂಗಾರಪ್ಪ, ಚೆಕ್ ಬೌನ್ಸ್ ವಿಚಾರವೂ ಖಾಸಗಿ ಸಂಗತಿ. ಅಪ್ಪ ಬದುಕಿದ್ದಾಗಲೇ ಈ ವಹಿವಾಟು ನಡೆದಿತ್ತು. ಈಗ ನ್ಯಾಯಾಲಯದ ಮೂಲಕ ಪರಿಹರಿಸಿಕೊಂಡಿದ್ದೇವೆ’ ಎಂದರು