ನವದೆಹಲಿ: ಜನವರಿ 22 ರ ಬಳಿಕ ಅಯೋಧ್ಯೆಯ ರಾಮಮಂದಿರಕ್ಕೆ (Ayodhya Ram Mandir) ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಸರಿಯಾಗಿದೆ. ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರೆ ಏನು ತಪ್ಪು ಎಂದು ಸಚಿವ ಕೆ.ಎನ್.ರಾಜಣ್ಣ (K.N.Rajanna) ಪ್ರಶ್ನಿಸಿದ್ದಾರೆ.
ಅಯೋಧ್ಯೆಗೆ ಭೇಟಿ ನೀಡುವ ಹೇಳಿಕೆ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಅವರು, ಮಂದಿರಾ ಬಿಜೆಪಿ ನಾಯಕರ ಸ್ವತ್ತೆ. ಹಿಂದೆ ಹೇಳಿದ್ದು ಸರಿ, ಈಗ ಹೇಳುವುದು ಸರಿಯಾಗೇ ಇದೆ ಎಂದು ಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಅಥವಾ ಅವರಿಗೆ ಜಾಗೀರು ಕೊಟ್ಟಿದ್ದೀವಾ? ನಾವು ಹಿಂದೂಗಳು ಅಲ್ಲದೇ ಇನ್ನೇನು? ವೋಟಿಗಾಗಿ ಬಿಜೆಪಿ ಪದೇ ಪದೆ ಹಿಂದೂ ಹಿಂದೂ ಅಂತ ಹೇಳುತ್ತಾರೆ. ಅಂಬೇಡ್ಕರ್ ಹಿಂದೂವಾಗಿ ಸಾಯುವುದಿಲ್ಲ ಎಂದ್ರು ಯಾಕೆ? ಈ ರೀತಿ ಹಿಂದುತ್ವ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎನ್ನುವ ಕಾರಣಕ್ಕೆ ವಿಮುಖವಾದರು ಎಂದು ತಿಳಿಸಿದ್ದಾರೆ.
ಈ ರೀತಿ ಮಾತನಾಡುವ ಬದಲು ಮೊದಲು ರಾಮಮಂದಿರಕ್ಕೆ ದಲಿತರನ್ನು ಬಿಡಲು ಹೇಳಿ. ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಕ ಮಾಡಲು ಹೇಳಿ. ಹಿಂದೂಗಳಿಗೆ ಅವರು ಏನು ಮಾಡಿದ್ದಾರೆ? ಬರೀ ಚುನಾವಣೆಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಅಯೋಧ್ಯೆಗೆ ಭೇಟಿ ನೀಡುವುದು ಸರಿಯಾಗಿದೆ ಎಂದು ಸಮರ್ಥಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಬಗ್ಗೆ ಮಾತನಾಡಿ, ಖರ್ಗೆಯವರನ್ನು ನಾವು ಐವರು ಸಚಿವರು ಭೇಟಿಯಾಗಿದ್ವಿ. ಚುನಾವಣೆ ಕುರಿತು ಅವರ ಮಾತುಗಳು ನಮ್ಮ ಉತ್ಸಾಹ ಹೆಚ್ಚಿಸಿದೆ. ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳು ಗೆಲ್ಲಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.