ಬೆಂಗಳೂರು:- ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಕರ್ನಾಟಕಕ್ಕೆ ಉಪಯೋಗ ಏನು!? ಎಂದು ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಮ್ಮ ಸರ್ಕಾರ ಬೀಳಿಸ್ತೀವಿ ಅಂತಾ ಹೊರಟಿರೋದು ಅವರು. ಕೇಂದ್ರ ಸಚಿವರಾಗಿರುವ ಅವರಿಂದ ರಾಜ್ಯಕ್ಕೆ ಏನಾದರೂ ಉಪಯೋಗ ಆಗಿದೆಯಾ? ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಅನ್ಯಾಯ ಆಗ್ತಿದೆ. ನಮ್ಮ ರಾಜ್ಯದಿಂದ ಸಚಿವರಾಗಿ ಇರೋ ಇವರು ಏನ್ ಮಾಡ್ತಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ರಾಜ್ಯದ ಕೇಂದ್ರ ಸಚಿವರಿಗೆ ರಾಜ್ಯಕ್ಕೆ ಅನ್ಯಾಯ ಆಗ್ತಿರೋದು ಕಾಣಿಸ್ತಿಲ್ವಾ? ರಾಜ್ಯಕ್ಕೆ ಹೊಡೆತಗಳು ಬಿಳ್ತಿವೆ. ಅನ್ಯಾಯ ಆಗ್ತಿದ್ರೂ ಇವರು ನ್ಯಾಯ ಕೊಡಿಸುವಲ್ಲಿ ವಿಫಲ ಆಗಿದ್ದಾರೆ. ರಾಜ್ಯದ ಹಿತ ಮುಖ್ಯ ಅಲ್ವಾ ಅವರಿಗೆ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸೋದು ಮುಖ್ಯನಾ ಇವರಿಗೆ? ಕಾಂಗ್ರೆಸ್ ಸರ್ಕಾರ ಉರುಳಿಸಿದರೆ ನಿಮಗೆ ರಾಜಕೀಯ ಲಾಭ ಆಗಬಹುದು. ಆದರೆ ರಾಜ್ಯಕ್ಕೆ, ರಾಜ್ಯದ ಜನಕ್ಕೆ ಏನ್ ಲಾಭ? ಆಗ್ತಿರುವ ಅನ್ಯಾಯ ಸರಿ ಮಾಡಲಿ. ರಾಜ್ಯದ ಜನರ ಮೇಲೆ ಸೇಡು ತೀರಿಸ್ಕೋತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ದುರುದ್ದೇಶದಿಂದ ತಮ್ಮ ಮೇಲೆ ಎಫ್ಐಆರ್ ಹಾಕಿಸಲಾಗಿದೆ ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಮಾತನಾಡಿ, ಹೆಚ್ಡಿಕೆ ವಿರುದ್ಧ ದೂರು ಕೊಟ್ಟವರು ಕಾಂಗ್ರೆಸ್ನವ್ರಲ್ಲ. ದೂರುದಾರರು ಜೆಡಿಎಸ್ನಲ್ಲಿ ಪದಾಧಿಕಾರಿ ಆಗಿದ್ದವರು. ನಾವು ಅವರಿಗೆ ಹೇಳಿ ದೂರು ಕೊಡಿಸಲು ಆಗುತ್ತಾ? ಸುಮ್ಮನೆ ರಾಜಕೀಯಕ್ಕಾಗಿ ಕುಮಾರಸ್ವಾಮಿ ಮಾತಾಡೋದು ಬೇಡ. ಸತ್ಯ ಇದರಿಂದ ಮರೆಯಾಗಲ್ಲ. ತನಿಖೆ ಆಗಲಿ, ಸತ್ಯ ಗೊತ್ತಾಗುತ್ತೆ ಎಂದು ಟಾಂಗ್ ಕೊಟ್ಟರು.