ಬೆಂಗಳೂರು: 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 230 ಜಿಲ್ಲೆಗಳ 50,000ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಆಸ್ತಿ ಕಾರ್ಡ್ಗಳನ್ನು ವಿತರಿಸಿದ್ದಾರೆ. 2020ರ ಏಪ್ರಿಲ್ 24ರಂದು ಕೇಂದ್ರ ಸರ್ಕಾರ ‘ಸ್ವಾಮಿತ್ವ ಯೋಜನೆ’ಯನ್ನು ಆರಂಭಿಸಿತು.
ಈ ಯೋಜನೆಯಡಿ ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಮ್ಯಾಪಿಂಗ್ ಸಮೀಕ್ಷೆ ಆರಂಭಿಸಿದೆ. ಇದು ಕೇಂದ್ರ ಅನುದಾನಿತ ಯೋಜನೆಯಾಗಿದ್ದು, ಪಂಚಾಯತ್ ರಾಜ್ (ಅಥವಾ MOPR)ಇಲಾಖೆ ಈ ಯೋಜನೆ ನೋಡಲ್ ಇಲಾಖೆಯಾಗಿದೆ. ನೋಡಲ್ ಇಲಾಖೆ ಮತ್ತು ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸರ್ವೆ ಆಫ್ ಇಂಡಿಯಾ ತಾಂತ್ರಿಕ ಪಾಲುದಾರಿಕೆ ಹೊಂದಿದೆ.
ಏನಿದು ಸ್ವಾಮಿತ್ವ ಯೋಜನೆ?: ಸ್ವಾಮಿತ್ವ (ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ಮ್ಯಾಪಿಂಗ್) ಯೋಜನೆಯನ್ನು 2020ರ ಏಪ್ರಿಲ್ 4ರಂದು ಪ್ರಾರಂಭ ಮಾಡಲಾಗಿದ್ದು, ಗ್ರಾಮ ವಾಸಿಗಳಿಗೆ ತಮ್ಮ ಆಸ್ತಿ ಹಕ್ಕಿನ ಮಾಲೀಕತ್ವ ನೀಡುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆ ಅಡಿ, ಆಸ್ತಿ ಮಾಲೀಕರಿಗೆ ಹಕ್ಕಿನ ದಾಖಲೆಯನ್ನು ನೀಡಲಾಗುವುದು. ಈ ಆಸ್ತಿ ಕಾರ್ಡ್ ಅನ್ನು ಸುಧಾರಿತ ಡ್ರೋನ್ ಮತ್ತು ಜಿಐಎಸ್ ತಂತ್ರಜ್ಞಾನದ ಮೂಲಕ ಮಾಪನ ಮಾಡಲಾಗುವುದು.
ಇದು ಪಂಚಾಯತ್ ರಾಜ್ ಸಚಿವಾಲಯದ ಉಪಕ್ರಮವಾಗಿದ್ದು, ಅದರ ಮೂಲಕ ಇದನ್ನು ಜಾರಿ ಮಾಡಲಾಗುತ್ತಿದೆ. ಇದು ಗ್ರಾಮೀಣ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಭೂ ಮಾಲೀಕತ್ವ ನೀಡುವ ಮೂಲಕ ಆಡಳಿತದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಗ್ರಾಮೀಣ ಸಮುದಾಯವನ್ನು ಸಬಲೀಕರಣಗೊಳಿಸುವ ಮತ್ತು ಭೂ ಮಾಲೀಕತ್ವದ ಭರವಸೆ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿ ಉತ್ತೇಜಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಇದು ಹೊಂದಿದೆ. ಆಸ್ತಿ ಮಾಲೀಕತ್ವವನ್ನು ನೀಡುವ ಮೂಲಕ ಗ್ರಾಮೀಣ ನಿವಾಸಿಗಳಿಗೆ ಸಾಲ, ಸರ್ಕಾರಿ ಸೌಲಭ್ಯ ಮತ್ತು ಸೇವೆ ಸೌಲಭ್ಯವನ್ನು ಉತ್ತಮಗೊಳಿಸುವ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸ್ಥಿರತೆ ಉತ್ತೇಜಿಸಲಾಗುವುದು.
ಸ್ವಾಮಿತ್ವ ಯೋಜನೆಯು ಗ್ರಾಮೀಣ ಆಡಳಿತದಲ್ಲಿ ಮಾರ್ಪಡುವಿಕೆ ಮತ್ತು ಆಸ್ತಿ ಮಾಲೀಕರಿಗೆ ಕಾನೂನು ಮಾನ್ಯತೆಯನ್ನು ಖಾತ್ರಿ ಪಡಿಸುವಲ್ಲಿ ಪ್ರಮುಖವಾಗಿದೆ. ವಿಶೇಷವಾಗಿ ಗ್ರಾಮಗಳಲ್ಲಿ ಭೂ ದಾಖಲೆಗಳು ಅಪೂರ್ಣ ಮತ್ತು ಗೈರಾಗಿರುವಲ್ಲಿ ಇದು ಮಾಲೀಕತ್ವ ನೀಡುವಲ್ಲಿ ಪ್ರಮುಖವಾಗಿದೆ.
ಸ್ವಾಮಿತ್ವ ಯೋಜನೆಯ ಉದ್ದೇಶಗಳೇನು?
- ರೈತರ ಭೂಮಿಯನ್ನು ಗ್ರಾಮೀಣ ಪ್ರದೇಶದಲ್ಲಿ ಆನ್ ಲೈನ್ ಮೂಲಕ ನಿಗಾ ಮಾಡಲಾಗುತ್ತದೆ.
- ಪಿಎಂ ‘Svamitva’ ಯೋಜನೆಯಡಿ ಡ್ರೋಣ್ ಮ್ಯಾಪಿಂಗ್ ಮಾಡಲಾಗುತ್ತದೆ.
- ಭೂಮಿಯ ನಿಜವಾದ ಮಾಲೀಕರಿಗೆ ಅದರ ಹಕ್ಕು ದೊರೆಯುವಂತೆ ಮಾಡಲಾಗುತ್ತದೆ.
- ಭೂಮಿ ಹಸ್ತಾಂತರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲಾಗುತ್ತದೆ.
- ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮನೆ/ ಕೃಷಿ ಸಾಲ ಸುಲಭವಾಗಿ ದೊರೆಯುವಂತಾಗಬೇಕು.
- ಆ ಆಸ್ತಿಗೆ ಸಂಬಂಧಿಸಿದ ಡಿಜಿಟಲ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗುತ್ತದೆ.
ಅರ್ಜಿ ಪ್ರಕ್ರಿಯೆ ಹೇಗೆ?
- ಪಿಎಂ ಸ್ವಾಮಿತ್ವ ಯೋಜನೆಯ ಅಧಿಕೃತ ವೆಬ್ ಸೈಟ್ (https://egramswaraj.gov.in/)ಗೆ ಭೇಟಿ ನೀಡಿ.
- ಹೋಮ್ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿ ನ್ಯೂ ರಿಜಿಸ್ಟ್ರೇಷನ್ ಎಂಬ ಆಯ್ಕೆ ಕಾಣಿಸುತ್ತದೆ.
- ನ್ಯೂ ರಿಜಿಸ್ಟ್ರೇಷನ್ ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲೆ ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ.
- ಫಾರ್ಮ್ನಲ್ಲಿರುವ ಮಾಹಿತಿಗಳನ್ನು ಎಚ್ಚರಿಕೆಯಿಂದ ಓದಿದ ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಸಬ್ ಮಿಟ್ ಬಟನ್ ಒತ್ತಬೇಕು.
- ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಆಗಿದೆ. ಒಂದು ವೇಳೆ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಈ ವೆಬ್ ಸೈಟ್ https://mahayojana.com/ ನಲ್ಲಿ ನಿಮ್ಮ ಇ ಮೇಲ್ ಐಡಿ ನಮೂದಿಸಿ. ಮುಂದೆ ಏನು ಮಾಡಬೇಕೆಂಬ ಸೂಚನೆಗಳು ಸಿಗುತ್ತವೆ.
ಆನ್ ಲೈನ್ ನಲ್ಲಿ ಪ್ರಾಪರ್ಟಿ ಕಾರ್ಡ್ ಡೌನ್ ಲೋಡ್ ಮಾಡುವುದು ಹೇಗೆ?
- ಆಸ್ತಿಯ ಮಾಲೀಕರ ಮೊಬೈಲ್ ಫೋನ್ ಗೆ ಎಸ್ಸೆಮ್ಮೆಸ್ ಬರುತ್ತದೆ.
- ಎಸ್ಸೆಮ್ಮೆಸ್ ನಲ್ಲಿ ಇರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ಈಗ ಪ್ರಾಪರ್ಟಿ ಕಾರ್ಡ್ ಡೌನ್ ಲೋಡ್ ಆಗುತ್ತದೆ.
- ಎಲ್ಲ ರಾಜ್ಯ ಸರ್ಕಾರಗಳು ಆ ನಂತರ ಪ್ರಾಪರ್ಟಿ ಕಾರ್ಡ್ ಗಳನ್ನು ಆಯಾ ಆಸ್ತಿ ಮಾಲೀಕರಿಗೆ ಹಂಚುತ್ತವೆ.