ಬೆಂಗಳೂರು: ಜನವರಿ 24 ರಂದು ವಾರ್ಷಿಕವಾಗಿ ಆಚರಿಸಲಾಗುವ ಅಂತರರಾಷ್ಟ್ರೀಯ ಶಿಕ್ಷಣ ದಿನವು, ಜಾಗತಿಕವಾಗಿ ಶಾಂತಿ ಮತ್ತು ಅಭಿವೃದ್ಧಿಯನ್ನು ಬೆಳೆಸುವಲ್ಲಿ ಶಿಕ್ಷಣದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ. ಹೇಳಬೇಕಾಗಿಲ್ಲ, ಶಿಕ್ಷಣ ಮಾತ್ರ ಜಗತ್ತನ್ನು ಬದಲಾಯಿಸಬಲ್ಲದು. ಶಿಕ್ಷಿತ ಮನಸ್ಸು ಖಾಲಿ ಮನಸ್ಸುಗಿಂತ ಉತ್ತಮವಾದದ್ದನ್ನು ಅನೇಕರಿಗೆ ಕಲಿಸಬಲ್ಲದು. ಅನ್ಯಾಯದ ವಿರುದ್ಧ ಹೋರಾಡಲು ಏಕೈಕ ಆಯುಧವೆಂದರೆ ಶಿಕ್ಷಣ.
ಸತತ ನಾಲ್ಕು ವರ್ಷಗಳಿಂದ ಈ ದಿನವನ್ನು ಅಂತರರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಐದನೇ ವರ್ಷದ ಆಚರಣೆಯನ್ನು ಮಾಡಲಾಗುತ್ತದೆ. ಇದರ ಉದ್ದೇಶ ಏನೆಂದರೆ ಶಿಕ್ಷಣಕ್ಕೆ ಆದ್ಯತೆ ನೀಡುವುದು. ಶಾಂತಿ, ಸುಸ್ಥಿರ ಅಭಿವೃದ್ಧಿ, ವೈಯಕ್ತಿಕ ಮತ್ತು ಸಾಮೂಹಿಕ ಯೋಗಕ್ಷೇಮದ ಮಾರ್ಗವಾಗಿ ಶಿಕ್ಷಣದ ಪರವಾಗಿ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಜಾಗತಿಕ ವೇದಿಕೆಯಾಗಿ ಇದನ್ನು ಆಚರಿಸುತ್ತಾರೆ.
ಅಂತಾರಾಷ್ಟ್ರೀಯ ಶಿಕ್ಷಣ ದಿನದ ಇತಿಹಾಸ
ಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲು, ಡಿಸೆಂಬರ್ 3, 2018 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ನೈಜೀರಿಯಾ ಹಾಗೂ 58 ಇತರ ಸದಸ್ಯ ರಾಷ್ಟ್ರಗಳಿಂದ ಸಹ ಈ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿತು. ಅಂದಿನಿಂದ ಪ್ರತಿ ವರ್ಷವು ಜನವರಿ 24 ರಂದು ಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಂತಾರಾಷ್ಟ್ರೀಯ ಶಿಕ್ಷಣ ದಿನದ ಮಹತ್ವ
ಅಂತಾರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುವ ಮುಖ್ಯ ಉದ್ದೇಶವೆಂದರೆ ಜಗತ್ತಿನಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಶಾಂತಿ ಮತ್ತು ಅಭಿವೃದ್ಧಿಯು ಮಾನವ ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯಗಳಾಗಿದೆ. ಅದನ್ನು ಸಾಧಿಸುವ ಏಕೈಕ ಮಾರ್ಗವೆಂದರೆ ಅದುವೇ ಶಿಕ್ಷಣ. ವಿವಿಧ ಅಂಕಿ ಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಲಕ್ಷಾಂತರ ಮಕ್ಕಳು ಇನ್ನೂ ಶಾಲೆಗೆ ಹೋಗುತ್ತಿಲ್ಲ.
ಶಾಲೆಗೆ ಹೋಗುವ ಮಕ್ಕಳು ಕೋಟಿಗಟ್ಟಲೆ ಇದ್ದರೂ, ಗುಣಮಟ್ಟದ ಶಿಕ್ಷಣದಲ್ಲಿ ತೀವ್ರ ಕೊರತೆ ಇದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಶಿಕ್ಷಣದ ಮಹತ್ವ ಸಾರುವ ಸಲುವಾಗಿ ಅಭಿಯಾನ, ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತವೆ.
ಶಿಕ್ಷಣದ ಬಗೆಗಿನ ಮಹಾನ್ ವ್ಯಕ್ತಿಗಳ ನುಡಿಮುತ್ತುಗಳು
* ಸಂಪತ್ತಿಗಿಂತ ಜ್ಞಾನಕ್ಕೆ ಆದ್ಯತೆ ನೀಡಿ ಏಕೆಂದರೆ ಒಂದು ಕ್ಷಣಿಕ, ಮತ್ತೊಂದು ಶಾಶ್ವತ – ಸಾಕ್ರಟೀಸ್.
* ಶಿಕ್ಷಣದ ಬೇರುಗಳು ಕಹಿಯಾಗಿಯೇ ಇರಬಹುದು, ಆದರೆ ಫಲ ಸಿಹಿಯಾಗಿಯೇ ಇರುತ್ತದೆ – ಅರಿಸ್ಟಾಟಲ್.
* ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ ಸರಳ ಜೀವನವನ್ನು ಕಲಿಸುವ ವಿದ್ಯೆಯೇ ಶ್ರೇಷ್ಠವಾದದ್ದು – ಟಾಲ್ಸ್ ಟಾಯ್.
* ವಿದ್ಯಾಭ್ಯಾಸ ಯಾವ ದಿಕ್ಕಿನಲ್ಲಿ ಮನುಷ್ಯನನ್ನು ನಡೆಸುವುದೋ ಅದೇ ಅವನ ಭವಿಷ್ಯವನ್ನು ನಿರ್ಧರಿಸುವುದು – ಪ್ಲೇಟೋ.
* ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದ್ದರೆ, ನೀನು ಓದಿದ್ದು ವ್ಯರ್ಥ – ಪ್ರೇಮಚಂದ್ರ.
* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ – ಡಾ. ಎಸ್ ರಾಧಾಕೃಷ್ಣನ್.