ರಾಜಮೌಳಿ- ಪ್ರಿನ್ಸ್ ಮಹೇಶ್ ಬಾಬು (Mahesh Babu) ಸಿನಿಮಾ ಶೂಟಿಂಗ್ ಇನ್ನೇನು ಆರಂಭವಾಗಲಿದೆ. ಅದಕ್ಕಾಗಿ ರಾಜಮೌಳಿ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈಗ ಬಂದಿರುವ ಮಾಹಿತಿ ಪ್ರಕಾರ, ಭರ್ತಿ 1500 ಕೋಟಿ ರುಪಾಯಿ ಬಂಡವಾಳ ಸುರಿಯುತ್ತಿದ್ದಾರಂತೆ. ಬಾಹುಬಲಿಗೆ 400 ಕೋಟಿ ಹಾಕಿದ್ದರು. ಆದರೆ ಅದರ ಮೂರು ಪಟ್ಟು ಪ್ರಿನ್ಸ್ ಮಹೇಶ್ ಸಿನಿಮಾಗೆ ಖರ್ಚಾಗುತ್ತಿದೆ. ಅದ್ಯಾಕೆ ಅಷ್ಟೊಂದು ಕಾಸು? ಹಾಕಿದ ಬಂಡವಾಳ ವಾಪಸ್ ಪಡೆಯಲು ರಾಜಮೌಳಿ ಮಾಡಿರುವ ಪ್ಲಾನ್ ಏನು? ಇಲ್ಲಿದೆ ಮಾಹಿತಿ
ರಾಜಮೌಳಿ (Rajamouli) ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ‘ಆರ್ಆರ್ಆರ್’ (RRR) ಸಿನಿಮಾ ಕೊಟ್ಟ ಗೆಲುವು ಮರೆತು ಹೊಸ ಯುದ್ಧಕ್ಕೆ ತಯಾರಾಗಿದ್ದಾರೆ. ಈ ಬಾರಿ ಮಹೇಶ್ ಬಾಬು ಜೊತೆಯಾಗಿದ್ದಾರೆ. 10 ವರ್ಷದಿಂದ ಈ ಜೋಡಿ ನೋಡಲು ಎಲ್ಲರೂ ಕಾಯುತ್ತಿದ್ದರು. ಅದಕ್ಕೀಗ ಸಮಯ ಬರುತ್ತಿದೆ. ಆದರೆ ಇದಕ್ಕೆ ಖರ್ಚು ಮಾಡುತ್ತಿರುವ ಕಾಸಿನ ಮೊತ್ತ ಕೇಳಿಯೇ ವಿಶ್ವ ದಂಗಾಗಿದೆ. ಕಾರಣ ಅನಾಮತ್ತು 1500 ಕೋಟಿಯನ್ನು ರಾಜಮೌಳಿ ನಿರ್ಮಾಪಕರಿಂದ ಹಾಕಿಸಲಿದ್ದಾರೆ.
ಇಷ್ಟು ಕಾಸು ಸುರಿಯಲು ಕಾರಣವೂ ಇದೆ. ಇದು ಗ್ಲೋಬಲ್ ಸಿನಿಮಾ. ದಕ್ಷಿಣ ಆಫ್ರಿಕಾ ಸೇರಿದಂತೆ ಜಗತ್ತಿನ ದಂಡ ಕಾರಣ್ಯದಲ್ಲಿ ನಡೆಯಲಿದೆ. ಹಾಲಿವುಡ್ ಮೀರಿಸುವ ಕತೆಯನ್ನು ವಿಜಯೇಂದ್ರ ಪ್ರಸಾದ್ ಹೆಣೆದಿದ್ದಾರೆ. ಸ್ಟೀವನ್ ಸ್ಪೀಲ್ಬರ್ಗ್ ಸೂಪರ್ ಹಿಟ್ ಸೀರೀಸ್ ಇಂಡಿಯಾನಾ ಜೋನ್ಸ್ ಮಾದರಿಯಲ್ಲಿ ತಯಾರಾಗಲಿದೆ. ಅದಕ್ಕಾಗಿ ಇಷ್ಟು ಕಾಸು. ಹಾಕಿದ ಬಂಡವಾಳ ಮರಳಿ ಪಡೆಯಲು ಜಗತ್ತಿನ ಹಲವಾರು ಭಾಷೆಗೆ ಚಿತ್ರ ಡಬ್ ಮಾಡಲಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಮೊದಲ ಬಾರಿ ಗ್ಲೋಬಲ್ ಮೆರವಣಿಗೆಗೆ ಸಜ್ಜಾಗಲಿದ್ದಾರೆ.