ವ್ಯಾಲೆಂಟೀನ್ ವಾರ ಶುರುವಾಗಿದೆ. ರೋಸ್ ಡೇ, ಪ್ರಪೋಸ್ ಡೇ ಮತ್ತು ಚಾಕೊಲೇಟ್ ಡೇಯನ್ನು ಆಚರಿಸಿಕೊಂಡಿದ್ದ ಪ್ರೇಮಿಗಳು ಈಗ ನಾಲ್ಕನೇ ದಿನದ ಸಂಭ್ರಮದಲ್ಲಿದ್ದಾರೆ. ಈ ಮೂರು ದಿನಗಳ ನಂತರ ಬರುವುದು `ಟೆಡ್ಡಿ ಡೇ’ ಅರ್ಥಾತ್ ಗೊಂಬೆಯನ್ನು ಗಿಫ್ಟ್ ಕೊಡುವ ದಿನ. ಮೊದಲ ದಿನ ರೋಸ್ ಡೇಯಂದು ಗುಲಾಬಿ ಹೂ ಕೊಟ್ಟು ಪರಸ್ಪರ ಅಭಿಪ್ರಾಯ ಹಂಚಿಕೊಂಡರೆ,
ಪ್ರಪೋಸ್ ಡೇ ದಿನ ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಲಾಗುತ್ತದೆ. ಪ್ರೇಮ ನಿವೇದನೆಯ ಮರುದಿನ ಬರುವುದೇ ಚಾಕೊಲೇಟ್ ಡೇ. ಅಂದರೆ, ಆವತ್ತು ಪ್ರೀತಿಸಿದವರಿಗೆ ಚಾಕೊಲೇಟ್ ಬಾಕ್ಸ್ ಗಿಫ್ಟಾಗಿ ಕೊಡಲಾಗುತ್ತದೆ. ಈ ಮೂರು ದಿನದ ಸಂಭ್ರಮ ಮುಗಿದ ಬಳಿಕ ಫೆಬ್ರವರಿ 10ಕ್ಕೆ ಬರುವುದು ಈ `ಟೆಡ್ಡಿ ಡೇ’.
ಟೆಡ್ಡಿ ಡೇಯಂದು ತಾವು ಪ್ರೀತಿಸಿದವರಿಗೆ ತಮ್ಮ ಪ್ರೀತಿಯ ಪ್ರತೀಕವಾಗಿ ಮುದ್ದು ಮುದ್ದಾದ ಗೊಂಬೆಯನ್ನು ಗಿಫ್ಟ್ ರೂಪದಲ್ಲಿ ಕೊಟ್ಟು ಒಂದಷ್ಟು ಅಮೂಲ್ಯ ಸಮಯವನ್ನು ಜೊತೆಯಾಗಿ ಕಳೆಯಲಾಗುತ್ತದೆ. ಇದು ಪ್ರೀತಿಸಿದ ಹೃದಯಗಳು ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಸದಾವಕಾಶ ಕೂಡಾ ಹೌದು. ಜೊತೆಯಾಗಿ ತಮ್ಮ ಅಮೂಲ್ಯ ಸಮಯವನ್ನು ಕಳೆಯಲಿರುವ ಪ್ರೇಮಿಗಳು, ಭವಿಷ್ಯದ ದಿನಗಳು, ಬದುಕಿನ ಹಾದಿಯ ಬಗೆಗೂ ಈ ಸಂದರ್ಭದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಇಲ್ಲಿದೆ.
ಟೆಡ್ಡಿಗಳ ಬಣ್ಣದ ಸಂಕೇತಗಳು:
ಹಸಿರು ಟೆಡ್ಡಿ ಬೇರ್: ನೀವು ಅವರಿಗಾಗಿ ಸದಾ ಕಾಯುತ್ತೀರಿ ಎಂಬ ಅರ್ಧ.
ನೀಲಿ ಟೆಡ್ಡಿ : ನೀವು ನಿಮ್ಮ ಪ್ರೇಮಿಯನ್ನು ಅತಿಯಾಗಿ ಪ್ರೀತಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ.
ಪಿಂಕ್ ಟೆಡ್ಡಿ ಬೇರ್: ನೀವು ಅವರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂದರ್ಥ.
ಕಪ್ಪು ಟೆಡ್ಡಿ ಬೇರ್: ನಿಮ್ಮ ಸಂಗಾತಿಯಿಂದ ಕಪ್ಪು ಬಣ್ಣದ ಟೆಡ್ಡಿ ಬೇರ್ ಪಡೆದರೆ ಅವರು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ.
ಹೆಚ್ಚಿನ ಹುಡುಗಿಯರು ಟೆಡ್ಡಿಯನ್ನು ಇಷ್ಟ ಪಡುವುದರಿಂದ ನಿಮ್ಮ ಪ್ರೇಮಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿ. ಇದಲ್ಲದೇ ನೀವು ಅವರೊಂದಿಗೆ ಸದಾ ಜೊತೆಯಾಗಿ ಇದ್ದೀರಿ ಎಂಬ ಭಾವನೆಯನ್ನು ಅದು ನೀಡುತ್ತದೆ.
ಪ್ರೀತಿ ಎನ್ನುವುದು ಎಲ್ಲಾ ಸಂಬಂಧಗಳಲ್ಲೂ ಇರುತ್ತದೆ. ನಿಸ್ವಾರ್ಥ ಸ್ನೆಹ, ಪ್ರೀತಿ ಹಾಗೂ ನಂಬಿಕೆಯು ಎಲ್ಲಿ ಇರುತ್ತದೆಯೋ ಅಲ್ಲಿ ಪ್ರೀತಿ, ಕಾಳಜಿ ಇರುತ್ತದೆ. ಇಂತಹ ಪ್ರೀತಿ ಯಾವೆಲ್ಲಾ ಸಂಬಂಧಗಳಲ್ಲಿ ಇರುವುದೋ ಆ ಸಂಬಂಧಗಳು ಸಹ ಸಿಹಿಯಾಗಿಯೇ ಉಳಿದುಕೊಳ್ಳುತ್ತವೆ. ಹಾಗಾಗಿ ಸ್ನೇಹಿತರಿಗೆ, ಪಾಲಕರಿಗೆ, ಬಂಧುಗಳಿಗೆ, ಸಹೋದರ, ಸಹೋದರಿಯರಿಗೂ ಸಹ ಟೆಡ್ಡಿ ದಿನದಂದು ವಿಶೇಷವಾದ ಟೆಡ್ಡಿ ಗೊಂಬೆ ನೀಡಿ ನಿಮ್ಮ ಪ್ರೀತಿ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಬಹುದು.
ಪ್ರೇಮಿಗಳ ದಿನದ ಅರ್ಥ ಪ್ರೀತಿಯನ್ನು ಹಂಚಿಕೊಳ್ಳುವುದು ಅಥವಾ ಹೇಳಿಕೊಳ್ಳುವುದು ಎನ್ನುವ ಅರ್ಥವನ್ನು ನೀಡುತ್ತದೆ. ಅಂದು ನೀವು ನಿಮ್ಮ ಸಂಗಾತಿ ಅಥವಾ ಪ್ರೇಮಿಗಳಿಗೆ ಮಾತ್ರ ಶುಭ ಕೋರುವುದು ಎಂದರ್ಥವಲ್ಲ. ನೀವು ಜೀವನದಲ್ಲಿ ಪ್ರೀತಿಸುವ ಬಂಧುಗಳು, ಸ್ನೇಹಿತರು ಮತ್ತು ಕುಟುಂಬದವರಿಗೂ ಶುಭ ಕೋರಬಹುದು.