ಅನೇಕ ಬಾರಿ ಮೆದುಳು ನಿರ್ದಿಷ್ಟ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತದೆ. ಅದ್ರಲ್ಲಿ ಬ್ರೈನ್ ಟ್ಯೂಮರ್ ಕೂಡ ಸೇರಿದೆ. ಮೆದುಳಿನಲ್ಲಿ ಗಡ್ಡೆ ಬೆಳೆಯಲು ಶುರುವಾಗ್ತಿದ್ದಂತೆ ಮೆದುಳು ನಮಗೆ ಸೂಚನೆ ನೀಡಲು ಶುರು ಮಾಡುತ್ತದೆ. ದೇಹದ ವಿವಿಧ ಅಂಗಗಳ ಮೂಲಕ ಸೂಚನೆ ರವಾನೆ ಮಾಡುತ್ತದೆ. ಆರಂಭದಲ್ಲಿಯೇ ನಮಗೆ ಬ್ರೈನ್ ಟ್ಯೂಮರ್ ಲಕ್ಷಣ ಪತ್ತೆಯಾದ್ರೆ ಅದ್ರ ಚಿಕಿತ್ಸೆ ಸುಲಭವಾಗುತ್ತದೆ. ಜನರಿಗೆ ಬ್ರೈನ್ ಟ್ಯೂಮರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಣೆ ಮಾಡಲಾಗುತ್ತದೆ.
Famous Places: ಉಡುಪಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು ಯಾವುವು ಗೊತ್ತಾ..? ಈ ಸ್ಟೋರಿ ನೋಡಿ
ವಿಶ್ವ ಬ್ರೈನ್ ಟ್ಯೂಮರ್ ಡೇಯನ್ನು ಯಾವಾಗ ಆಚರಿಸಲಾಗುತ್ತದೆ? : ಪ್ರತಿ ವರ್ಷ ಜೂನ್ 8 ರಂದು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಬ್ರೈನ್ ಟ್ಯೂಮರ್ ಬಗ್ಗೆ ಜಾಗತಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಜರ್ಮನ್ ಬ್ರೈನ್ ಟ್ಯೂಮರ್ ಅಸೋಸಿಯೇಷನ್ 2000 ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಿಸಿತು.
ಬ್ರೈನ್ ಟ್ಯೂಮರ್ ಅಂದ್ರೇನು? : ಮೆದುಳಿನಲ್ಲಿ ಅಥವಾ ಅದರ ಸಮೀಪ, ಜೀವಕೋಶ (Cell) ಗಳ ಬೆಳವಣಿಗೆಯನ್ನು ಮೆದುಳಿನ ಗಡ್ಡೆ ಎನ್ನಲಾಗುತ್ತದೆ. ಮೆದುಳಿನ ಅಂಗಾಂಶವಲ್ಲದೆ ಹತ್ತಿರದ ನರಗಳು, ಪಿಟ್ಯುಟರಿ ಗ್ರಂಥಿ, ಪೀನಲ್ ಗ್ರಂಥಿ ಮತ್ತು ಮೆದುಳಿನ ಮೇಲ್ಮೈ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಈ ಬ್ರೈನ್ ಟ್ಯೂಮರ್ ಬೆಳೆಯಲು ತಿಂಗಳು ಅಥವಾ ವರ್ಷಗಳೇ ಬೇಕಾಗಬಹುದು.
ಬ್ರೈನ್ ಟ್ಯೂಮರ್ ಲಕ್ಷಣಗಳು : ಎಲ್ಲ ಲಕ್ಷಣಗಳೂ ಬ್ರೈನ್ ಟ್ಯೂಮರ್ ಎನ್ನಲು ಸಾಧ್ಯವಿಲ್ಲದೆ ಹೋದ್ರೂ ಬ್ರೈನ್ ಟ್ಯೂಮರ್ ಸಂದರ್ಭದಲ್ಲಿ ಈ ಲಕ್ಷಣಗಳು ಅನೇಕರಿಗೆ ಕಾಣಿಸಿಕೊಳ್ಳುತ್ತವೆ. ಮೆದುಳಿನಲ್ಲಿ ಗಡ್ಡೆ ಇರುವವರಿಗೆ ವಿಪರೀತ ತಲೆನೋವು ಕಾಡುತ್ತದೆ. ಬೆಳಗಿನ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಕಾಣಬಹುದು.
ಹಾಗೆಯೇ ನೆನಪಿನ ಶಕ್ತಿಯನ್ನು ವ್ಯಕ್ತಿ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ವಾಕರಿಕೆ, ವಾಂತಿ ಕೂಡ ರೋಗಿಯನ್ನು ಕಾಡುತ್ತದೆ. ಸುಸ್ತು, ನಿದ್ರಾಹೀನತೆ, ದೈನಂದಿನ ಚಟುವಟಿಕೆ ಮಾಡುವ ಸಾಮರ್ಥ್ಯದಲ್ಲಿ ಇಳಿಕೆ ಇವೆಲ್ಲವೂ ಬ್ರೈನ್ ಟ್ಯೂಮರ್ ಲಕ್ಷಣವಾಗಿದೆ. ಗೆಡ್ಡೆಯ ಕಾರಣದಿಂದಾಗಿ ಮೆದುಳಿನ ನಿರ್ದಿಷ್ಟ ಭಾಗವು ಸರಿಯಾಗಿ ಕೆಲಸ ಮಾಡದಿದ್ದರೆ, ರೋಗಲಕ್ಷಣಗಳು ತೀವ್ರವಾಗಿರುತ್ತವೆ. ವ್ಯಕ್ತಿಪದಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಮಾತನಾಡುವ ಸಮಸ್ಯೆ ಎದುರಿಸುತ್ತಾನೆ.
ಬ್ರೈನ್ ಟ್ಯೂಮರ್ ನಲ್ಲಿ ಎಷ್ಟು ವಿಧ? ಹೇಗೆ ವಿಂಗಡಿಸಲಾಗಿದೆ?
- ಮ್ಯಾಲಿಜ್ಞೆನ್ಟ್ ಬ್ರೈನ್ ಟ್ಯೂಮರ್: ಇದು ಕ್ಯಾನ್ಸರ್ ಸಹಿತ ಸಮಸ್ಯೆ.
- ಬೆನಿಗ್ನ್ ಬ್ರೈನ್ ಟ್ಯೂಮರ್: ಅಂದರೆ ಕ್ಯಾನ್ಸರ್ ರಹಿತ ಸಮಸ್ಯೆ.
- ಪ್ರೈಮರಿ ಬ್ರೈನ್ ಟ್ಯೂಮರ್: ಇದು ಮೊದಲು ಮೆದುಳಿನಲ್ಲಿ ಆರಂಭವಾಗುವ ಬ್ರೈನ್ ಟ್ಯೂಮರ್.
- ಮೆಟಾಸ್ಟಾಟಿಕ್ ಟ್ಯೂಮರ್: ಇದು ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಒಳಗೊಂಡು ನಂತರ ಮಿದುಳಿಗೆ ಹರಡುವ ಟ್ಯೂಮರ್.
ಮೆದುಳಿನ ಗಡ್ಡೆ ಪತ್ತೆ ಮಾಡೋದು ಹೇಗೆ? : ಈಗ ರೋಗವನ್ನು ಪತ್ತೆ ಮಾಡಲು ಸಾಕಷ್ಟು ವಿಧಾನವಿದೆ. ಸಿಟಿ ಅಥವಾ ಸಿಎಟಿ ಸ್ಕ್ಯಾನ್ ಮೂಲಕ ಬ್ರೈನ್ ಟ್ಯೂಮರ್ ಪತ್ತೆ ಮಾಡಬಹುದಾಗಿದೆ. ಇದಲ್ಲದೆ ಎಂಆರ್ ಐ ಸ್ಕ್ಯಾನ್ ಕೂಡ ಮಾಡಲಾಗುತ್ತದೆ. ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ ಮೂಲಕ ಗೆಡ್ಡೆಗಳ ರಾಸಾಯನಿಕ ಪ್ರೊಫೈಲ್ ಅನ್ನು ಪರೀಕ್ಷಿಸಬಹುದು. ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಕೂಡ ಗೆಡ್ಡೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಕಾರಣಗಳೇನು?
- ಕುಟುಂಬದ ಇತಿಹಾಸದಲ್ಲಿ ಮೆದುಳು ಕ್ಯಾನ್ಸರ್ ಇದ್ದಲ್ಲಿ.
- ದೀರ್ಘಕಾಲದಿಂದ ಧೂಮಪಾನ ಮಾಡುತ್ತಿದ್ದರೆ.
- ಸಸ್ಯನಾಶಕಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವಾಗ ತೆಗೆದುಕೊಳ್ಳದೇ ಇರುವ ಮುನ್ನೆಚ್ಚರಿಕೆಗಳು.
- ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು ಅಂದರೆ ಅಂತಹ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವುದರಿಂದಲೂ ಬರಬಹುದು.
- ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸ್ಟೀನ್-ಬಾರ್ ವೈರಸ್ ಸೋಂಕನ್ನು ಹೊಂದಿರುವುದು.
ಬ್ರೈನ್ ಟ್ಯೂಮರ್ ಗೆ ಚಿಕಿತ್ಸೆ : ಮೆದುಳಿನ ಗೆಡ್ಡೆಯನ್ನು ಪತ್ತೆಹಚ್ಚಲು ಬಯಾಪ್ಸಿ ಏಕೈಕ ಮಾರ್ಗವಾಗಿದೆ. ಮೆದುಳಿನ ಗೆಡ್ಡೆಯ ತೀವ್ರತೆಯನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕೀಮೋಥೆರಪಿಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ.
ಬ್ರೈನ್ ಟ್ಯೂಮರ್ ಆನುವಂಶಿಕವೇ? : ನಿಮ್ಮ ರಕ್ತ ಸಂಬಂಧಿಗಳಲ್ಲಿ ಬ್ರೈನ್ ಟ್ಯೂಮರ್ ಆಗಿದ್ದಲ್ಲಿ, ಸಾಮಾನ್ಯರಿಗಿಂತ ನಿಮಗೆ ಟ್ಯೂಮರ್ ಕಾಡುವ ಅಪಾಯ ಹೆಚ್ಚು. ಪೋಷಕರು, ಒಡಹುಟ್ಟಿದವರು ಅಥವಾ ಮಗುವಿಗೆ ಈ ಸಮಸ್ಯೆಯಿದ್ದರೆ ನೀವು ಎಚ್ಚರಿಕೆಯಿಂದ ಇರಬೇಕು.