ಬೆಂಗಳೂರು:- ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಆಟೋ ಡ್ರೈವರ್ನ ರೋಷಾವೇಷ ಕಂಡು ಯುವತಿ ಬೆಚ್ಚಿ ಬಿದ್ದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಯುವತಿಯೊಬ್ಬಳು ತನ್ನ ಗೆಳತಿಯ ಜೊತೆ ಸೇರಿ ಆಟೋ ಸೇವೆಯನ್ನು ಪಡೆಯಲು ಮುಂದಾಗಿದ್ದಾಳೆ. ಇಬ್ಬರು ಪೀಕ್ ಹವರ್ ಇದ್ದ ಕಾರಣ ಇಬ್ಬರು ಒಂದೊಂದು ಓಲಾ ಆಟೋ ಬುಕ್ ಮಾಡಿದ್ದಾರೆ. ಯಾವುದು ಮೊದಲು ಬರುತ್ತದೆಯೋ ಅದನ್ನು ಹತ್ತಿಕೊಂಡು ಹೋದರಾಯ್ತು ಅಂತ ನಿರ್ಧರಿಸಿ. ಮೊದಲ ಬಂದ ಆಟೋ ಏರಿ ಕುಳಿತ ಯುವತಿಯರು ಎರಡನೇ ಆಟೋದ ಸೇವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮತ್ತೊಂದು ಆಟೋ ಡ್ರೈವರ್, ನಾನು ಸಾಕಷ್ಟು ದೂರದಿಂದ ಬಂದಿದ್ದೇನೆ, ಗ್ಯಾಸ್ ಏನು ನಿಮ್ಮಪ್ಪ ಹಾಕ್ತಾನಾ ಅಂತ ಅರಚಾಡಿದ್ದಾನೆ.
ಅದು ಮಾತ್ರವಲ್ಲದೇ ಕೆಟ್ಟ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಕೊನೆಗೆ ಯುವತಿ ಮುಖಕ್ಕೆ ಹೊಡೆದಿದ್ದಾನೆ. ಇದೆಲ್ಲವನ್ನೂ ವಿಡಿಯೋ ಮಾಡಿಕೊಂಡ ಯುವತಿ ಅದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಾಕಿದ್ದಾಳೆ. ಇಡೀ ವಿಡಿಯೋದಲ್ಲಿ ಆಟೋ ಡ್ರೈವರ್ ಪೌರುಷ ಪ್ರದರ್ಶನವಾಗಿದೆ. ಅವಾಚ್ಯ ಶಬ್ದಗಳೇ ಅವನ ಬಾಯಿಂದ ಆಚೆ ಬಂದಿವೆ.
ಈ ಎಲ್ಲಾ ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಯುವತಿ, ಬೆಂಗಳೂರು ಸಿಟಿ ಪೊಲೀಸ್, ಓಲಾ ಹಾಗೂ ಓಲಾ ಸಪೋರ್ಟರ್ಸ್ ಖಾತೆಗಳನ್ನ ಟ್ಯಾಗ್ ಮಾಡಿದ್ದಾರೆ. ಯುವತಿಯ ಪೋಸ್ಟ್ಗೆ ಸ್ಪಂದಿಸಿರುವ ಬೆಂಗಳೂರು ಪೊಲೀಸರು ಕೂಡಲೇ ಘಟನೆ ನಡೆದ ಏರಿಯಾ ಮತ್ತು ನಿಮ್ಮ ಮೊಬೈಲ್ ನಂಬರ್ನ್ನು ಡಿಎಂ ಅಂದ್ರೆ ಡೈರೆಕ್ಟ್ ಮೆಸೇಜ್ ಮಾಡುವಂತೆ ಸೂಚಿಸಿದ್ದಾರೆ. ಆಟೋ ಡ್ರೈವರ್ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ