ಮಂಗಳವಾರ ನಡೆದ ಹರಾಜು ಪ್ರಕ್ರಿಯೆ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿ ಮಾತನಾಡಿದ್ದಾರೆ.
ಆರ್ಸಿಬಿಯು ಅತ್ಯುತ್ತಮ ಹಾಗೂ ಸಮತೋಲನದಿಂದ ಕೂಡಿದ ತಂಡ ರಚಿಸುವ ಕಾರ್ಯತಂತ್ರದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
‘ಕಳೆದ ಆವೃತ್ತಿ ಮುಗಿದ ನಂತರ ನಾವು, ತವರಿನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ ಎಂಬ ಬಗ್ಗೆ ಚಿಂತನೆ ನಡೆಸಿದ್ದೆವು. ಅದರಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ತೋರಲು, ತಂಡದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಿದ್ದೆವು’ ಎಂದಿದ್ದಾರೆ.
ಸುಧಾರಣೆ ತರುವ ನಿಟ್ಟಿನಲ್ಲಿ, ತವರಿನಲ್ಲಿ ಚೆನ್ನಾಗಿ ಆಡಬಲ್ಲ ಬ್ಯಾಟರ್ ಮತ್ತು ಬೌಲರ್ಗಳನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿಯೇ ಕಳೆದ ಎರಡು ತಿಂಗಳಿನಿಂದ ಯೋಜಿಸಲಾಗಿತ್ತು. ಅದರಂತೆ ಹರಾಜು ಪ್ರಕ್ರಿಯೆಯಲ್ಲಿ ಆಟಾರರನ್ನು ಖರೀದಿಸಲಾಗಿದೆ ಎಂದು ಪ್ಲೆಸಿ ಹೇಳಿದ್ದಾರೆ.
ತಂಡದ ಸಂಯೋಜನೆ ಬಗ್ಗೆ ಮುಖ್ಯ ಕೋಚ್ ಆಯಂಡಿ ಫ್ಲವರ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ‘ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿ, ರಜತ್ ಪಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನೊಳಗೊಂಡ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ. ಕ್ಯಾಮರೂನ್ ಗ್ರೀನ್, ಇನ್ನಷ್ಟು ಬಲ ತುಂಬಲಿದ್ದಾರೆ’ ಎಂದಿದ್ದಾರೆ.