ಬೆಂಗಳೂರು: ಬಿಜೆಪಿಯಿಂದ (BJP) ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಇಂದು ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಮಾತನಾಡಿದ ಅವರು, “ವಿಧಾನಸಭಾ ಚುನಾವಣೆ ವೇಳೆ ಕೆಲವು ಕಾರಣಗಳಿಗಾಗಿ ಬಿಜೆಪಿ ತೊರೆದಿದ್ದೆ. ಮತ್ತೆ ನಮ್ಮ ನಾಯಕರು ಮರಳಿ ಪಕ್ಷಕ್ಕೆ ಬಾ ಎಂದು ವಿನಂತಿಸಿಕೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರಳಿ ಪಕ್ಷಕ್ಕೆ ಬಂದಿರುವೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಪಕ್ಷಕ್ಕೆ ಮತ್ತೆ ದುಡಿಯುತ್ತೇನೆ” ಎಂದರು.
ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಆಗುತ್ತಿರೋದು ನನಗೆ ಸಂತೋಷದ ಸಂಗತಿ. ಕಾಂಗ್ರೆಸ್ ವಿಧಾನಪರಿಷತ್ ಸದಸ್ಯತ್ವಕ್ಕೆ ನಾನು ಈಗಾಗಲೇ ರಾಜೀನಾಮೆ ಕೊಟ್ಟಿದ್ದೇನೆ. ಇ-ಮೇಲ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಸಹ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಮೂಲಕ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇವತ್ತು ನಮ್ಮ ದೇಶದ ಮುಂದಿರೋದು ಎಲ್ಲರನ್ನು ಒಗ್ಗೂಡಿಸುವುದು. ರಕ್ಷಣೆ ಹಾಗೂ ಹಿತರಕ್ಷಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಗತಿ, ಶಕ್ತಿ ವೃದ್ಧಿಸಲು ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಮತ್ತೊಮ್ಮೆ ಅವರ ನಾಯಕತ್ವದಲ್ಲಿ ದೇಶದಲ್ಲಿ ಹೆಚ್ಚಿನ ಶಕ್ತಿ ಬರಬೇಕು. ಬಿಜೆಪಿ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಬೇಕು. ದೇಶದ ಅತಿದೊಡ್ಡ ಬಿಜೆಪಿ ಕಾರ್ಯಕರ್ತರ ಅವರೆಲ್ಲರ ಇಚ್ಛೆಯಿಂದ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದೇನೆ. ಪಕ್ಷಕ್ಕೆ ನಿಷ್ಠೆಯಾಗಿ ತನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಬಿಜೆಪಿಯಿಂದ ಅಸಮಾಧಾನಗೊಂಡಿದ್ದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಗೆ ಸೇರಿದ್ದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಇದೀಗ ಮತ್ತೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘವಾದ ಚರ್ಚೆ ನಡೆಸಿದರು. ಈ ವೇಳೆ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ.