ಕಣ್ಣಿನ ರೆಪ್ಪೆಗಳಲ್ಲಿರುವ ತೈಲ ಗ್ರಂಥಿಗಳ ಸೋಂಕಿನಿಂದ, ರೆಪ್ಪೆಗಳ ಮೇಲೆ ಸಣ್ಣ, ಕೆಂಪಾದ ಗುಳ್ಳೆಗಳು ಕಾಣಿಸಿಕೊಂಡು ನೋವುಂಟು ಮಾಡುತ್ತವೆ. ಕಣ್ಣು ಊದಿಕೊಂಡಂತಾಗಬಹುದು. ನೋಡುವುದಕ್ಕೆ ಮುಖದ ಮೇಲೆ ಬರುವಂಥ ಮೊಡವೆಗಳಂತೆಯೇ ಕಾಣುವ ಈ ಗುಳ್ಳೆಗಳನ್ನು ತಪ್ಪಿಯೂ ಚಿವುಟಬಾರದು. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಇದು ಯಾರಿಗೂ ಕಾಣಿಸಿಕೊಳ್ಳಬಹುದು. ಅದರಲ್ಲೂ ಅಲರ್ಜಿ ಇರುವವರಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚು ಕಾಡಬಹುದು. ಅಂಥ ಗಂಭೀರ ಸಮಸ್ಯೆಯೇನೂ ಅಲ್ಲದ ಇದನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು. ಹಾಗಾಗುವುದಕ್ಕೆ ಮಾಡಬೇಕಾದ್ದೇನು ಎಂಬ ಬಗ್ಗೆ ಮಾಹಿತಿಯಿದು
ಹೀಗೆ ಮಾಡಿ
ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ಹಿಂಡಿ ತೆಗೆದು ಸೋಂಕಿನ ಕಣ್ಣುಗಳನ್ನು ಶುಚಿ ಮಾಡಿ. ಇದರಿಂದ ಕಣ್ಣಿನ ಉರಿ, ತುರಿಕೆಗಳಿದ್ದರೆ ಕಡಿಮೆಯಾಗುತ್ತದೆ. ಇದನ್ನೆಲ್ಲಾ ಮಾಡುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ. ಯಾವಾಗ ಕಣ್ಣುಗಳನ್ನು ಮುಟ್ಟುವಾಗಲೂ ಕೈಗಳ ಸ್ವಚ್ಛತೆಯ ಬಗ್ಗೆ ಗಮನ ಇರಲಿ.
ಎರಡೂ ಕಣ್ಣುಗಳನ್ನು ಏಕಕಾಲದಲ್ಲಿ ಮುಟ್ಟಬೇಡಿ ಅಥವಾ ಟವೆಲ್ ತಾಗಿಸಬೇಡಿ. ಇದರಿಂದ ಆರೋಗ್ಯವಂತ ಕಣ್ಣಿಗೂ ಇದು ಹರಡಬಹುದು. ಇವು ಗುಣವಾಗಲು ಸಾಮಾನ್ಯವಾಗಿ ವಾರದವರೆಗೆ ಬೇಕಾಗಬಹುದು. ಅಲ್ಲಿಯವರೆಗೆ ಈ ಸೂಕ್ಷ್ಮ ಅಂಗದ ಬಗ್ಗೆ ಹೆಚ್ಚಿನ ಕಾಳಜಿ ಬೇಕು.
ಸ್ವಚ್ಛ ಹತ್ತಿ ಬಟ್ಟೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ, ಅದನ್ನು ಸೋಂಕಿರುವ ಕಣ್ಣುಗಳ ಮೇಲೆ ಇರಿಸಿ ಕೊಂಚವೇ ಒತ್ತಿ, ಆದರೆ ಬಲಪ್ರಯೋಗ ಬೇಡ. ಹೀಗೆ ಮಾಡುವಾಗ ಕಣ್ಣುಗಳನ್ನು ಮುಚ್ಚಿಯೇ ಇರಿಸಿ, ತೆರೆಯಬೇಡಿ. ಇಂಥ ಲಘು ಶಾಖವನ್ನು ಹಲವಾರು ನಿಮಿಷಗಳವರೆಗೆ, ದಿನಕ್ಕೆ ಮೂರ್ನಾಲ್ಕು ಬಾರಿ ನೀಡಬಹುದು.
ಇದರಿಂದ ಕಣ್ಣಿನ ನೋವು, ಊತ ಕಡಿಮೆಯಾಗುತ್ತದೆ. ಮಾತ್ರವಲ್ಲ, ತೈಲ ಗ್ರಂಥಿಗಳು ಕಟ್ಟಿಕೊಂಡಿದ್ದರೆ, ಇಂಥ ಕ್ರಮಗಳಿಂದ ಅವು ಸ್ವಚ್ಛವೂ ಆಗಬಹುದು. ನಾಲ್ಕಾರು ದಿನಗಳ ನಂತರವೂ ಈ ಸಮಸ್ಯೆ ಕಡಿಮೆಯಾಗದಿದ್ದರೆ ಅಥವಾ ನೋವು, ಊತ ಹೆಚ್ಚಾದರೆ ಅಥವಾ ಪದೇಪದೆ ಸೋಂಕು ಮರುಕಳಿಸುತ್ತಿದ್ದರೆ ನೇತ್ರ ವೈದ್ಯರ ನೆರವು ಅಗತ್ಯ.
ಹೀಗೆ ಮಾಡಬೇಡಿ
ಯಾವುದೇ ಕಾರಣಕ್ಕೂ ಕಣ್ಣುಜ್ಜಬೇಡಿ ಅಥವಾ ಗುಳ್ಳೆಗಳನ್ನು ಚಿವುಟಬೇಡಿ. ಇದರಿಂದ ಕಣ್ಣಿಗೆಲ್ಲಾ ಸೋಂಕು ಹರಡುತ್ತದೆ. ಗುಳ್ಳೆಗಳು ಸಂಪೂರ್ಣ ಗುಣವಾಗುವವರೆಗೆ ಕಣ್ಣಿಗೆ ಯಾವುದೇ ರೀತಿಯ ಮೇಕಪ್ ಬಳಸಬೇಡಿ. ಈ ಸಂದರ್ಭದಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಸಹ ಬೇಡ. ಇದರಿಂದಲೂ ಸಮಸ್ಯೆ ಹೆಚ್ಚಬಹುದು. ಬಿಸಿಲಿಗೆ ಹೋಗುವಾಗ ಒಳ್ಳೆಯ ಗುಣಪಟ್ಟದ ಕಪ್ಪು ಕನ್ನಡದ ಅಗತ್ಯವಿದೆ. ಈ ದಿನಗಳಲ್ಲಿ ಕಣ್ಣುಗಳ ಸ್ವಚ್ಛತೆಯನ್ನು ಮಾತ್ರ ಎಂದಿಗೂ ಕಡೆಗಣಿಸಕೂಡದು.
ಈ ಸೋಂಕು ಒಬ್ಬರಿಂದೊಬ್ಬರಿಗೆ ಹರಡಬಲ್ಲದು. ಹಾಗಾಗಿ ಖಾಸಗಿ ವಸ್ತುಗಳನ್ನು, ಅಂದರೆ ಟವೆಲ್, ಕರವಸ್ತ್ರಗಳು ಇತ್ಯಾದಿಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ದೀರ್ಘ ಕಾಲದವರೆಗೆ ಸ್ಕ್ರೀನ್ ನೋಡುವುದರಿಂದ ಗುಣವಾಗುವುದು ತಡವಾಗಬಹುದು. ಅಂಗಡಿಯಲ್ಲಿ ದೊರೆಯುವ ಯಾವುದೇ ಡ್ರಾಪ್, ಕ್ರೀಮ್, ಜೆಲ್ಗಳನ್ನು ತಂದು ಸ್ವಯಂವೈದ್ಯ ಮಾಡಿಕೊಳ್ಳಬೇಡಿ. ಮನೆಯಲ್ಲಿನ ಪ್ರಾಥಮಿಕ ಶುಶ್ರೂಷೆಯಿಂದ ಇದು ಗುಣವಾಗದಿದ್ದರೆ, ಚಿಕಿತ್ಸೆಗಾಗಿ ನೇತ್ರ ತಜ್ಞರ ಬಳಿಯೇ ಹೋಗಿ.