ಬೆಂಗಳೂರು: ಬ್ರೇಕ್ಫಾಸ್ಟ್ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೆಲ್ಲಾ ಬರ್ತಾರೋ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ತೇವೆ. ನಾವು ಯಾವುದೇ ಆಪರೇಷನ್ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ ಎಂದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಆಪರೇಷನ್ ಹಸ್ತ ಕೈಗೊಳ್ಳುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರಿಸುತ್ತಾ, ಆಪರೇಷನ್ ಹಸ್ತ ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದರು.
ಈಗಿನ ಮುಖ್ಯಮಂತ್ರಿಗಳು ಎಷ್ಟು ಅವಧಿಗೆ ಮುಖ್ಯಮಂತ್ರಿಗಳಾಗಿ ಉಳಿಯಲಿದ್ದಾರೆ ಎಂಬ ಪ್ರಧಾನಿಯವರ ರಾಜಕೀಯ ಭಾಷಣದಲ್ಲಿನ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಕೇವಲ ಆರೋಪ ಮಾಡಬೇಕೆಂಬ ಉದ್ದೇಶದಿಂದ ಆರೋಪ ಮಾಡಲಾಗುತ್ತಿದ್ದು, ಇವೆಲ್ಲವೂ ಸುಳ್ಳಿನ ಕಂತೆ ಎಂದರು.
ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಕರ್ನಾಟಕವನ್ನೇ ಗುರಿ ಮಾಡಿ ಮಾತನಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಚಾರ ಮಾಡಿದಲ್ಲೆಲ್ಲಾ ಬಿಜೆಪಿ ಸೋತಿದೆ. ರಾಜ್ಯದಲ್ಲಿ ಇದುವರೆಗೆ ವಿರೋಧಪಕ್ಷದ ನಾಯಕರನ್ನು ಆಯ್ಕೆಮಾಡಿಲ್ಲ. ಇದು ಬಿಜೆಪಿಯ ದಿವಾಳಿಯಾಗಿರುವುದನ್ನು ಸೂಚಿಸುತ್ತದೆ ಎಂದರು.